
ಕಾರಕಾಸ್: ಸೆಕೆಂಡುಗಳ ಅಂತರದಲ್ಲಿ ವೆನೆಜುವೆಲಾದಲ್ಲಿ ಸಂಭವಿಸಿದ್ದ ಅವಳಿ ಭೂಕಂಪದ ಪರಿಣಾಮ 2,595 ಜನರು ಪ್ರಾಣಕಳೆದುಕೊಂಡಿದ್ದಾರೆ. ಜೊತೆಗೆ 11,000ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಅವರು, ಜೂ.24ರಂದು ಸಂಭವಿಸಿದ ಭೀಕರ ಅವಳಿ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 2,595ಕ್ಕೆ ಏರಿಕೆಯಾಗಿದೆ. ಈ ಭೀಕರ ನೈಸರ್ಗಿಕ ವಿಕೋಪದಲ್ಲಿ 11,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯುವ ರಕ್ಷಣಾ ಕಾರ್ಯಾಚರಣೆ ಇನ್ನು ನಿರಂತರವಾಗಿ ಸಾಗಿದೆ ಎಂದು ತಿಳಿಸಿದ್ದಾರೆ.
ಅವಳಿ ಭೂಕಂಪದಿಂದಾಗಿ ಸಾವಿರಾರು ಜನರು ನಾಪತ್ತೆಯಾಗಿದ್ದಾರೆ. ಆದರೆ ಮೃತರ ಗೌರವಾರ್ಥವಾಗಿ ಯಾವುದೇ ಸಾಮೂಹಿಕ ಸಮಾಧಿಗಳನ್ನು ನಿರ್ಮಿಸುವ ಯೋಜನೆ ಸರ್ಕಾರದ ಮುಂದೆ ಇಲ್ಲ. ಪ್ರಸ್ತುತ 31 ದೇಶಗಳು, ವಿವಿಧ ಬಹುಪಕ್ಷೀಯ ಸಂಸ್ಥೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಬೆಂಬಲದೊಂದಿಗೆ ವೆನೆಜುವೆಲಾ ಮೂಲಸೌಕರ್ಯಗಳ ಪುನರ್ನಿರ್ಮಾಣದಲ್ಲಿ ತೊಡಗಿದ್ದು, ಇದು ನಮ್ಮ ಜನರಿಗೆ ಸಿಕ್ಕ ಭರವಸೆ ಎಂದು ಬಣ್ಣಿಸಿದ್ದಾರೆ.
ಈ ಮಧ್ಯೆ, ಭೂಕಂಪದಿಂದ ತತ್ತರಿಸಿರುವ ವೆನೆಜುವೆಲಾದ ಪುನರ್ನಿರ್ಮಾಣ ಕಾರ್ಯಗಳಿಗಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವ ಬ್ಯಾಂಕ್ ಧನಸಹಾಯ ಹಾಗೂ ಸಾಲದ ನೆರವು ನೀಡಲು ಮುಂದೆ ಬಂದಿದೆ. 200 ಮಿಲಿಯನ್ ಡಾಲರ್ (1904 ಕೋಟಿ ರೂ.) ಮೊತ್ತದ ವಿಶೇಷ ಪುನರ್ನಿರ್ಮಾಣ ನಿಧಿಯನ್ನು ಸ್ಥಾಪಿಸಲಾಗುತ್ತಿದ್ದು, ಈ ಹಣವನ್ನು ನೇರವಾಗಿ ಗುತ್ತಿಗೆದಾರರಿಗೆ ವಿತರಿಸಲಾಗುವುದು ಎಂದಿದ್ದಾರೆ.










