ಕಟಪಾಡಿಯಲ್ಲಿ ರಥಕೊಡಕ್ಕೆ ಫ್ರೆಂಡ್ಸ್ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ನೋಟ್ ಪುಸ್ತಕ ವಿತರಣೆ-ಕಹಳೆ ನ್ಯೂಸ್

ಕಟಪಾಡಿ: ಇಲ್ಲಿನ ರಥಕೊಡಕ್ಕೆ ಫ್ರೆಂಡ್ಸ್ ವತಿಯಿಂದ ಸ್ಥಳೀಯ ಎಸ್‌ವಿಎಸ್ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಗೆ 2026-27ನೇ ಸಾಲಿನ ನೋಟ್ ಪುಸ್ತಕ ಹಾಗೂ ಸಮವಸ್ತ್ರ ವಿತರಣಾ ಕಾರ್ಯಕ್ರಮವು ಇತ್ತೀಚೆಗೆ ಅತ್ಯಂತ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಎಸ್‌ವಿಎಸ್ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಲಕ್ಷ್ಮೀಬಾಯಿ ಅವರು ಕನ್ನಡ ಮಾಧ್ಯಮದಲ್ಲಿ ಕಲಿಯುವುದರಿಂದ ಕೇವಲ ಅಕ್ಷರ ಜ್ಞಾನ ಮಾತ್ರ ಸಿಗುವುದಿಲ್ಲ, ಬದಲಿಗೆ ನಮ್ಮ ನೆಲದ ಸಂಸ್ಕೃತಿ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳು ರಕ್ತಗತವಾಗುತ್ತವೆ.ಜಗತ್ತಿಗೆ ಜ್ಞಾನದ ಬೆಳಕು ನೀಡಿದ ರಾಷ್ಟ್ರಕವಿ ಕುವೆಂಪು, ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ, ವಿಜ್ಞಾನಿ ಸಿ.ಎನ್.ಆರ್. ರಾವ್ ಅವರೆಲ್ಲಾ ಓದಿದ್ದು ಇದೇ ಕನ್ನಡ ಮಾಧ್ಯಮದಲ್ಲಿ! ಇಂದು ದೇಶ ಕಾಯುವ ಯೋಧರಿಂದ ಹಿಡಿದು, ಸಾಫ್ಟ್‌ವೇರ್ ಇಂಜಿನಿಯರ್‌ಗಳು, ಇಸ್ರೋ ವಿಜ್ಞಾನಿಗಳು ಹಾಗೂ ಕಠಿಣವಾದ UPSC ಪರೀಕ್ಷೆ ಪಾಸ್ ಮಾಡಿ IAS, IPS ಆದ ನೂರಾರು ಸಾಧಕರು ಕನ್ನಡ ಶಾಲೆಯ ಹೆಮ್ಮೆಯ ಗೌರವ, ಕನ್ನಡದಲ್ಲಿ ಕಲಿತ ಬುದ್ಧಿಶಕ್ತಿ ಇಂಗ್ಲಿಷ್ ಎಂಬ ಭಾಷೆಯನ್ನು ಸುಲಭವಾಗಿ ಗೆಲ್ಲಬಲ್ಲದು ಎಂಬುದಕ್ಕೆ ಇವರೇ ಸಾಕ್ಷಿ ಆದರೆ ಇವತ್ತು ಪರಿಸ್ಥಿತಿ ಬದಲಾಗಿದೆ. ಕನ್ನಡ ಮಾಧ್ಯಮದ ಶಾಲೆಗಳು ವಿದ್ಯಾರ್ಥಿಗಳಿಲ್ಲದೇ ಸೊರಗುತ್ತಿವೆ. ಇದಕ್ಕೆ ಮುಖ್ಯ ಕಾರಣ ಪೋಷಕರಲ್ಲಿರುವ ‘ಇಂಗ್ಲಿಷ್ ವ್ಯಾಮೋಹ’. ಇಂಗ್ಲಿಷ್ ಕಲಿತರೆ ಮಾತ್ರ ಕೆಲಸ ಸಿಗುತ್ತದೆ ಎಂಬ ತಪ್ಪು ಕಲ್ಪನೆ ಸಮಾಜವನ್ನು ಆವರಿಸಿದೆ. ಇದರೊಂದಿಗೆ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆ, ಆಧುನಿಕ ತಂತ್ರಜ್ಞಾನದ ಕೊರತೆ ಮತ್ತು ಖಾಸಗಿ ಇಂಗ್ಲಿಷ್ ಶಾಲೆಗಳ ಅಬ್ಬರದ ಪ್ರಚಾರದಿಂದಾಗಿ ಕನ್ನಡ ಮಾಧ್ಯಮ ಇಂದು ಅಳಿವು-ಉಳಿವಿನ ಹಾದಿಯಲ್ಲಿದೆ ಹಿತವಚನ ನೀಡಿದರು. ಇಂದಿನ ಪರಿಸ್ಥಿತಿಯಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ” ಎಂದು ಅವರು ಅಭಿಪ್ರಾಯಪಟ್ಟರು.ಕನ್ನಡ ಶಾಲೆಗಳನ್ನು ಹೈಟೆಕ್ ಮಾಡಬೇಕು. ಇಂಗ್ಲಿಷ್ ಅನ್ನು ಕೇವಲ ಒಂದು ‘ಭಾಷೆಯಾಗಿ’ ಪ್ರಬಲವಾಗಿ ಕಲಿಸುತ್ತಾ, ಬಾಕಿ ವಿಷಯಗಳನ್ನು ಕನ್ನಡದಲ್ಲೇ ಬೋಧಿಸಬೇಕು.
ಇದೇ ಸಂದರ್ಭದಲ್ಲಿ ಶಾಲೆಯ ಸುಮಾರು 75 ಕ್ಕೂ ಹೆಚ್ಚು ಅರ್ಹ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರ ಮತ್ತು ನೋಟ್ ಪುಸ್ತಕಗಳನ್ನು ವಿತರಿಸಿ, ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಪರವಾಗಿ ಬಿ. ಚಂದ್ರಕಾಂತ್ ಪೈ ಅವರು ವಹಿಸಿದ್ದರು. ವೇದಿಕೆಯಲ್ಲಿ ರಥಕೊಡಕ್ಕೆ ಫ್ರೆಂಡ್ಸ್ ಸಂಸ್ಥೆಯ ಪ್ರಮುಖ ಸದಸ್ಯರಾದ ಕೆ. ಜಗದೀಶ್ ಕಾಮತ್, ಶ್ರೀನಾಥ್, ಶ್ರೀನಿವಾಸ್ ಕಿಣಿ , ವಿಜೇಂದ್ರ ಭಟ್, ದಿವಾಕರ್ ಭಟ್ ಹಾಗೂ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀನಿವಾಸ್ ನೇರಳೆ ಮತ್ತು ಗಣೇಶ್ ಕಿಣಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು











