Thursday, June 25, 2026
ಸುದ್ದಿ

ಪೆಟ್ರೋಲ್ ಬಂಕ್ ಸಂಬಳ ಸಾಕಾಗದೆ ಬೈಕ್ ಕಳ್ಳನಾದ ಭೂಪ..! 42 ಬೈಕ್ ಜಪ್ತಿ ಮಾಡಿ ಮಾಲೀಕರಿಗೆ ನೀಡಿದ ವಿಜಯಪುರ ಪೊಲೀಸರು-ಕಹಳೆ ನ್ಯೂಸ್

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ  ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ನಿರಂತರವಾಗಿ ಮಾಯವಾಗುತ್ತಿದ್ದ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಕೈಗೊಂಡಿದ್ದ ವಿಜಯಪುರ ಠಾಣೆ ಪೊಲೀಸರು, ಒಂದೂವರೆ ವರ್ಷದಿಂದ ಪೊಲೀಸರ ಕಣ್ಣಿಗೆ ಮಣ್ಣೆರಚುತ್ತಿದ್ದ ಖತರ್ನಾಕ್ ಕಳ್ಳ ಖಲೀಲ್ ಅಹ್ಮದ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಬರೋಬ್ಬರಿ 42 ಕದ್ದ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇಡೀ ಪೊಲೀಸ್ ಠಾಣೆಯ ಆವರಣವೇ ಸದ್ಯ ಬೈಕ್‌ಗಳ ಜಾತ್ರೆಯಂತೆ ಕಾಣಿಸುತ್ತಿದೆ.

ಜಾಹೀರಾತು

ಸಂಬಳ ಸಾಕಾಗದೆ ಕಳ್ಳತನವನ್ನೇ ಕಸುಬಾಗಿಸಿಕೊಂಡ!

ಆರೋಪಿ ಖಲೀಲ್ ಅಹ್ಮದ್ ಕಳ್ಳತನದ ರೋಚಕ ಕಥೆಯನ್ನು ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಈ ಹಿಂದೆ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಈತನಿಗೆ ಅಲ್ಲಿ ಬರುತ್ತಿದ್ದ ಸಂಬಳದಲ್ಲಿ ಮೂವರು ಮಕ್ಕಳ ವಿದ್ಯಾಭ್ಯಾಸ ಹಾಗೂ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಮನೆಯಲ್ಲಿದ್ದ ಬಡತನದ ಕಾರಣಕ್ಕೆ ಸುಲಭವಾಗಿ ಹಣ ಗಳಿಸಲು ಪ್ಲಾನ್ ಮಾಡಿದ ಈತ, ನಕಲಿ ಕೀಗಳನ್ನು ಬಳಸಿ ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಕ್ ಮಾಡಿದ, ಬಸ್ ನಿಲ್ದಾಣ ಮತ್ತು ಬ್ಯಾಂಕ್‌ಗಳ ಮುಂದೆ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ಕದಿಯುವುದನ್ನು ಕಾಯಕ ಮಾಡಿಕೊಂಡಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೇವಲ 3 ಸಾವಿರ ರೂ.ಗೆ ಕದ್ದ ಬೈಕ್ ಮಾರುತ್ತಿದ್ದ ಆಸಾಮಿ

ಆರೋಪಿಯು ಕದ್ದ ಬೈಕ್‌ಗಳನ್ನು ಕೇವಲ 2 ರಿಂದ 3 ಸಾವಿರ ರೂಪಾಯಿಗಳಿಗೆ ಕೋಲಾರ ಹಾಗೂ ಮಾಲೂರು ಭಾಗದ ಬ್ರೋಕರ್‌ಗಳಿಗೆ ಮಾರಾಟ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಕದ್ದ ಬೈಕ್ ಖರೀದಿಸಿದ ಐದು ಜನ ಬ್ರೋಕರ್‌ಗಳ ಮೇಲೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೋರ್ಟ್ ಅಲೆಯುವ ಹಾಗಿಲ್ಲ; ಠಾಣೆಯಲ್ಲೇ ಬೈಕ್ ವಾಪಸ್!

ಸಾಮಾನ್ಯವಾಗಿ ಕದ್ದ ವಾಹನಗಳು ಸಿಕ್ಕರೂ ಅವುಗಳನ್ನು ಮರಳಿ ಪಡೆಯಲು ಸಾರ್ವಜನಿಕರು ನ್ಯಾಯಾಲಯಕ್ಕೆ ಅಲೆದು ವಕೀಲರ ವೆಚ್ಚ ಹಾಗೂ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಕಿತ್ತು. ಆದರೆ, ವಿಜಯಪುರ ಪೊಲೀಸರು ಜಾರಿಗೆ ತಂದಿರುವ ವಿನೂತನ ಜನಸ್ನೇಹಿ ಯೋಜನೆಯಡಿ, ಬೈಕ್ ಕಳೆದುಕೊಂಡ ಮಾಲೀಕರು ಕೋರ್ಟ್‌ಗೆ ಹೋಗುವ ಅಗತ್ಯವಿಲ್ಲದೆ ಠಾಣೆಯಲ್ಲೇ ಸೂಕ್ತ ದಾಖಲೆಗಳನ್ನು ನೀಡಿ, ಬಾಂಡ್ ಪೇಪರ್ ಬರೆದುಕೊಟ್ಟು ತಮ್ಮ ವಾಹನಗಳನ್ನು ನೇರವಾಗಿ ಬಿಡಿಸಿಕೊಂಡು ಹೋಗುತ್ತಿದ್ದಾರೆ.

ಕಳೆದುಹೋದ ಬೈಕ್‌ಗಳ ಮೇಲಿನ ನಿರೀಕ್ಷೆಯನ್ನೇ ಕೈಬಿಟ್ಟಿದ್ದ ಸಾರ್ವಜನಿಕರು ಹಾಗೂ ಸಂತ್ರಸ್ತರು ಇದೀಗ ತಮ್ಮ ವಾಹನಗಳು ಕೈಸೇರುತ್ತಿರುವುದನ್ನು ಕಂಡು ಪೊಲೀಸರ ಕಾರ್ಯವೈಖರಿಗೆ ಭಾರಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.