Wednesday, June 24, 2026
ಉಡುಪಿಕಾಪುರಾಜ್ಯಶಿಕ್ಷಣ

ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಪಡೆಯುವ ವಲ್ಲಿ ನಮ್ಮ ಬೆಂಬಲ ಸದಾ ಇರುತ್ತದೆ: ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭರವಸೆ -ಕಹಳೆ ನ್ಯೂಸ್

ಪಾಂಗಳ: “ವಿದ್ಯಾರ್ಥಿಗಳೇ, ನೀವು ಉತ್ತಮ ಶಿಕ್ಷಣ, ಸಂಸ್ಕಾರ ಹಾಗೂ ಉಜ್ವಲ ಭವಿಷ್ಯವನ್ನು ಬಯಸುವುದಾದರೆ ನಿಮ್ಮ ಬೆನ್ನಿಗೆ ಸದಾ ನಾವು ನಿಲ್ಲುತ್ತೇವೆ,” ಎಂದು ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.

ಜಾಹೀರಾತು

ಪಾಂಗಳ ವಿದ್ಯಾವರ್ಧಕ ಶಾಲೆಗಳು ಮತ್ತು ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿ ಪಾಂಗಳ ಆರ್ಯಡಿ ಗೋವಿಂದ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಉಚಿತ ಪುಸ್ತಕ ಹಾಗೂ ಸ್ಕೂಲ್ ಬ್ಯಾಗ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ದಾನ ಗುಣದ ಪಾಂಗಳ ಗೋವಿಂದ ಶೆಟ್ಟಿ ಮನೆತನಕ್ಕೆ ಶಾಸಕರ ಶ್ಲಾಘನೆ
ಕಾರ್ಯಕ್ರಮದಲ್ಲಿ ದಾನಿಗಳ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಶಾಸಕರು, “ಪಾಂಗಳ ಪರಿಸರದ ಶಾಲೆಗಳು, ದೇವಸ್ಥಾನಗಳು, ದೈವಸ್ಥಾನಗಳು, ಸಂಘ-ಸಂಸ್ಥೆಗಳು ಸೇರಿದಂತೆ ಎಲ್ಲಾ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರ ಜೊತೆಗೆ, ತಾನು ಗಳಿಸಿದ ಆದಾಯದಲ್ಲಿ ಒಂದು ಪಾಲನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಾ ಬಂದಿರುವುದು ಪಾಂಗಳ ಗೋವಿಂದ ಶೆಟ್ಟಿ ಮನೆತನದ ಹೆಮ್ಮೆಯ ದಾನ ಗುಣವಾಗಿದೆ. ಭಗವಂತನ ದಯೆಯಿಂದ ಅವರಿಗೆ ಇನ್ನಷ್ಟು ಸಮಾಜ ಸೇವೆ ಮಾಡುವ ಶಕ್ತಿ ಸಿಗಲಿ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದ ಅವರ ಮೇಲಿರಲಿ,” ಎಂದು ಹಾರೈಸಿದರು.

ಸಾಂಕೇತಿಕ ವಿತರಣೆ: ಇದೇ ಸಂದರ್ಭದಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಪುಸ್ತಕ ಹಾಗೂ ಬ್ಯಾಗ್ ವಿತರಣೆ ಮಾಡಿ, ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ದಾನಿಗಳಾದ ಗೋವಿಂದ ಶೆಟ್ಟಿ ಪಾಂಗಾಳ, ಶೈಲೇಶ್ ಶೆಟ್ಟಿ, ದಿನಕರ್ ಶೆಟ್ಟಿ, ಸುಧೀರ್ ಶೆಟ್ಟಿ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ಕಲ್ಯಾಣಿ, ನಿವೃತ್ತ ಶಿಕ್ಷಕರಾದ ಫ್ರಾನ್ಸಿಸ್ ಮಿನೆಜೆಸ್ ಹಾಗೂ ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.