
ದೋಹಾ: ಕತಾರ್‌ನ ಪ್ರಮುಖ ನೈಸರ್ಗಿಕ ಅನಿಲ ರಫ್ತು ಕೇಂದ್ರವಾದ ರಾಸ್ ಲಾಫನ್ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭಾರೀ ಸ್ಫೋಟದಿಂದ ಕನಿಷ್ಠ 54 ಮಂದಿ ಗಾಯಗೊಂಡಿದ್ದು, 18 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇರಾನ್ ಯುದ್ಧದ ಸಂದರ್ಭದಲ್ಲಿ ನಡೆಸಿದ ದಾಳಿಯ ಬಳಿಕ ಸ್ಥಗಿತಗೊಂಡಿದ್ದ ಅನಿಲ ರಫ್ತು ಕಾರ್ಯಾಚರಣೆಯನ್ನು ಪುನರಾರಂಭಿಸಲು ಕಾರ್ಮಿಕರು ಪ್ರಯತ್ನಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸ್ಫೋಟದ ಪರಿಣಾಮವಾಗಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ
ವಿಶ್ವದ ಅಗ್ರ ನೈಸರ್ಗಿಕ ಅನಿಲ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾದ ಕತಾರ್‌ನ ಈ ಪ್ರಮುಖ ಕೇಂದ್ರದಲ್ಲಿ ಸಂಭವಿಸಿದ ಸ್ಫೋಟ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಮತ್ತಷ್ಟು ಅನಿಶ್ಚಿತತೆ ಉಂಟುಮಾಡುವ ಸಾಧ್ಯತೆಯಿದೆ. ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್‌ನ ನಿಯಂತ್ರಣದ ಕಾರಣದಿಂದ ಕತಾರ್ ತನ್ನ ಅನಿಲ ರಫ್ತು ಮತ್ತು ಉತ್ಪಾದನಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿತ್ತು.
ಯುದ್ಧಕ್ಕೆ ಶಾಶ್ವತ ಅಂತ್ಯ ಕಾಣಿಸುವ ಕುರಿತು ಮಾತುಕತೆಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಇರಾನ್ ತನ್ನ ನಿಯಂತ್ರಣವನ್ನು ಸಡಿಲಗೊಳಿಸಿದ ನಂತರ, ಕತಾರ್ ಮತ್ತೆ ರಫ್ತು ಟರ್ಮಿನಲ್ ಕಾರ್ಯಾರಂಭಿಸಲು ಕ್ರಮ ಕೈಗೊಂಡಿತ್ತು. ಈ ಹಿನ್ನೆಲೆ ಭಾನುವಾರ ರಾತ್ರಿ ರಫ್ತು ಕಾರ್ಯಾಚರಣೆಗಳನ್ನು ಮರುಪ್ರಾರಂಭಿಸುವ ವೇಳೆ ಬರ್ಝಾನ್ ಅನಿಲ ಪೂರೈಕೆ ಘಟಕದಲ್ಲಿ ಸ್ಫೋಟ ಹಾಗೂ ಬೆಂಕಿ ಕಾಣಿಸಿಕೊಂಡಿದೆ ಎಂದು ಸರ್ಕಾರಿ ಸ್ವಾಮ್ಯದ ಕತಾರ್ ಎನರ್ಜಿ ಸಂಸ್ಥೆ ತಿಳಿಸಿದೆ.










