ಬೆಂಗಳೂರು ನಗರವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ: ಪರೋಕ್ಷವಾಗಿ ಖಾತೆ ಬಿಟ್ಟುಕೊಡಲ್ಲ ಎಂದ ಕೃಷ್ಣಬೈರೇಗೌಡ -ಕಹಳೆ ನ್ಯೂಸ್

ಬೆಂಗಳೂರು: ಸಚಿವ ಸಂಪುಟ ಪುನರ್‌ರಚನೆ ಬಳಿಕ ಬೆಂಗಳೂರು ಅಭಿವೃದ್ಧಿ ಖಾತೆ ಪಡೆದಿರುವ ಸಚಿವ ಕೃಷ್ಣ ಬೈರೇಗೌಡ ಈ ಜವಾಬ್ದಾರಿ ಸುಲಭವಾಗಿಲ್ಲ ಎಂದು ಹೇಳಿದ್ದಾರೆ. ಬೆಂಗಳೂರಿನ ಜನರ ಜೀವನಮಟ್ಟ ಸುಧಾರಿಸುವುದೇ ತಮ್ಮ ಮೊದಲ ಗುರಿ ಎಂದು ತಿಳಿಸಿದ್ದಾರೆ.
ಖಾತೆ ಹಂಚಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ತಾವು ಕಂದಾಯ ಇಲಾಖೆಯಲ್ಲಿ ಆರಂಭಿಸಿರುವ ಕೆಲಸಗಳನ್ನು ಪೂರ್ಣಗೊಳಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದೆ. ಆದರೆ ಪಕ್ಷದ ನಾಯಕತ್ವ ಬೆಂಗಳೂರು ಅಭಿವೃದ್ಧಿ ಖಾತೆ ನೀಡಿದೆ ಎಂದು ಹೇಳಿದರು.
ಬೆಂಗಳೂರು ಅಭಿವೃದ್ಧಿ ಇಲಾಖೆ ದೊಡ್ಡ ಸವಾಲಿನ ಜವಾಬ್ದಾರಿ. ನಗರ ಹಲವು ಜಟಿಲ ಸಮಸ್ಯೆಗಳನ್ನು ಎದುರಿಸುತ್ತಿದೆ. ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದು ಈಗಲೇ ಭರವಸೆ ನೀಡಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಉಪ ಮುಖ್ಯಮಂತ್ರಿಯಾಗಿದ್ದಾಗ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ಅಭಿವೃದ್ಧಿಗೆ ಹಲವು ಮಹತ್ವಾಕಾಂಕ್ಷಿ ಯೋಜನೆಗಳಿಗೆ ಅಡಿಪಾಯ ಹಾಕಿದ್ದಾರೆ. ಟನಲ್ ರಸ್ತೆ, ಎಲಿವೇಟೆಡ್ ಕಾರಿಡಾರ್ ಸೇರಿದಂತೆ ಹಲವು ಯೋಜನೆಗಳ ಕೆಲಸ ಆರಂಭಿಸಿದ್ದಾರೆ. ಕೆಲವೊಂದು ಕೆಲಸಗಳನ್ನು ಡಿ.ಕೆ. ಶಿವಕುಮಾರ್ ಅವರಿಂದ ಮಾತ್ರ ಮುನ್ನಡೆಸಲು ಸಾಧ್ಯವಾಗಿದೆ ಎಂದು ಕೃಷ್ಣ ಬೈರೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರು ನಗರದ ಕಸ ನಿರ್ವಹಣೆ, ಟ್ರಾಫಿಕ್ ಸಮಸ್ಯೆ ಹಾಗೂ ಖಾತೆ ಸಮಸ್ಯೆಗಳಂತಹ ದಿನನಿತ್ಯದ ಸಮಸ್ಯೆಗಳ ಕಡೆ ಹೆಚ್ಚು ಗಮನ ಹರಿಸಲಾಗುವುದು ಎಂದು ಹೇಳಿದರು. ಬೆಂಗಳೂರು ಬಹಳಷ್ಟು ಹದಗೆಟ್ಟಿದೆ. ಎಲ್ಲವನ್ನೂ ಒಂದೇ ರಾತ್ರಿ ಸರಿಪಡಿಸಲು ಸಾಧ್ಯವಿಲ್ಲ. ಕೆಲವೊಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಜನರೂ ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಬೆಂಗಳೂರು ರಾಜ್ಯದ ಆರ್ಥಿಕ ಶಕ್ತಿ ಕೇಂದ್ರ. ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ ಈ ನಗರವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಅಭಿವೃದ್ಧಿ ಯೋಜನೆಗಳ ಜೊತೆಗೆ ಜನರ ದೈನಂದಿನ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವುದು ನಮ್ಮ ಗುರಿ ಎಂದು ಕೃಷ್ಣ ಬೈರೇಗೌಡ ಹೇಳಿದರು. ಇದೇ ವೇಳೆ ಬೆಂಗಳೂರು ಅಭಿವೃದ್ದಿ ಇಲಾಖೆ ನೀಡದ ಕಾರಣ ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡಿರುವ ಬಗ್ಗೆ ಪ್ರಶ್ನಿಸಿದಾಗ ಕೃಷ್ಣ ಬೈರೇಗೌಡ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.











