
ವಾಷಿಂಗ್ಟನ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಆಪ್ತ ಸ್ನೇಹಿತ. ಅವರೊಂದಿಗೆ ಉತ್ತಮ ಬಾಂಧವ್ಯವಿದೆ. ಜೊತೆಗೆ ಭಾರತ ಹಾಗೂ ಅಮೆರಿಕ ನಡುವೆ ಶೀಘ್ರದಲ್ಲೇ ಮಹತ್ವದ ವ್ಯಾಪಾರ ಒಪ್ಪಂದ ಆಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ವೈಟ್‌ಹೌಸ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಟ್ರಂಪ್, ನಾವು ಶೀಘ್ರದಲ್ಲೇ ಈ ಒಪ್ಪಂದ ಮಾಡಿಕೊಳ್ಳಲಿದ್ದೇವೆ. ನನಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಎಂದರೆ ತುಂಬಾ ಇಷ್ಟ. ಅವರು ನನ್ನ ಉತ್ತಮ ಸ್ನೇಹಿತರೂ ಹೌದು. ನಮ್ಮಿಬ್ಬರ ಮಧ್ಯೆ ಉತ್ತಮ ಒಡನಾಟ ಹಾಗೂ ಸಂಬಂಧವಿದೆ. ಉಭಯ ದೇಶಗಳ ನಡುವಿನ ಆರ್ಥಿಕ ಮತ್ತು ರಾಜತಾಂತ್ರಿಕ ಸಂಬಂಧವನ್ನ ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಈ ಒಪ್ಪಂದ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದಿದ್ದಾರೆ.
ಭಾರತದ ತೆರಿಗೆ ನೀತಿಯ ಬಗ್ಗೆ ತಮಗಿರುವ ಹಳೆಯ ಅಸಮಾಧಾನವನ್ನ ಟ್ರಂಪ್ ಮತ್ತೊಮ್ಮೆ ಹೊರಹಾಕಿದ್ದಾರೆ. ಭಾರತವು ಅಮೆರಿಕದ ಉತ್ಪನ್ನಗಳ ಮೇಲೆ ಕಳೆದ ಹಲವು ವರ್ಷಗಳಿಂದ ಭಾರೀ ಪ್ರಮಾಣದ ಸುಂಕವನ್ನ ವಿಧಿಸುತ್ತಿದೆ. ಆದರೆ ಅಮೆರಿಕದ ಮಾರುಕಟ್ಟೆಯಿಂದ ತನ್ನ ಉತ್ಪನ್ನಗಳಿಗೆ ಹೆಚ್ಚಿನ ಲಾಭವನ್ನ ಪಡೆದುಕೊಳ್ಳುತ್ತಿದೆ. ಭಾರತ ಅಮೆರಿಕದ ಉದಾರತೆಯನ್ನ ದುರುಪಯೋಗ ಪಡಿಸಿಕೊಂಡಿದೆ ಎಂದು ಟ್ರಂಪ್ ಬೇಸರ ಹೊರಹಾಕಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ ವ್ಯವಹಾರದ ಚಿತ್ರಣ ಬದಲಾಗಿದೆ. ಪ್ರಸ್ತುತ ಆರ್ಥಿಕ ಬಾಂಧವ್ಯದಿಂದ ಅಮೆರಿಕಕ್ಕೆ ಹೆಚ್ಚಿನ ಲಾಭವಾಗುತ್ತಿದೆ ಎಂದು ಟ್ರಂಪ್ ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ಪ್ರಸಿದ್ಧ ಹಾರ್ಲೆ-ಡೇವಿಡ್ಸನ್ ಬೈಕ್ ಕಂಪನಿಯ ಉದಾಹರಣೆಯನ್ನ ಉಲ್ಲೇಖಿಸಿರುವ ಟ್ರಂಪ್, ಅವರು ಹಾರ್ಲೆ-ಡೇವಿಡ್ಸನ್ ಬೈಕ್‌ಗಳನ್ನು ಕೊಂಡುಕೊಳ್ಳುತ್ತಿರಲಿಲ್ಲ. ಅದರ ಮೇಲೆ ಬರೋಬ್ಬರಿ ಶೇ.200 ರಷ್ಟು ಭಾರೀ ಸುಂಕವನ್ನು ವಿಧಿಸುತ್ತಿದ್ದರು. ಆದರೆ ಅವರ ದೇಶದ ಬೈಕ್‌ಗಳನ್ನು ನಮ್ಮ ದೇಶದಲ್ಲಿ ಯಾವುದೇ ತೆರಿಗೆ ಇಲ್ಲದೆ ಸುಲಭವಾಗಿ ಮಾರಾಟ ಮಾಡಲು ಬಯಸಿದ್ದರು ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕ ಮತ್ತು ಭಾರತದ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಸದ್ಯ ಮಾತುಕತೆಗಳು ನಡೆಯುತ್ತಿವೆ. ಇದರ ನಡುವೆಯೇ ಟ್ರಂಪ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಒಪ್ಪಂದದಿಂದಾಗಿ ಉಭಯ ದೇಶಗಳ ನಡುವಿನ ಆರ್ಥಿಕ ಸಹಕಾರ ಮತ್ತು ಮಾರುಕಟ್ಟೆ ಅವಕಾಶಗಳು ಗಣನೀಯವಾಗಿ ವಿಸ್ತರಣೆಯಾಗಲಿವೆ ಎಂದು ಹಲವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ವಾಣಿಜ್ಯ ಸಚಿವಾಲಯ ಪ್ರತಿಕ್ರಿಯಿಸಿದ್ದು, ಉಭಯ ದೇಶಗಳ ನಡುವಿನ ವ್ಯಾಪಾರ ಮಾತುಕತೆಗಳು ಪರಸ್ಪರ ಸಹಕಾರ ಮನೋಭಾವವನ್ನು ಸೃಷ್ಟಿಸಲು ಸಹಕಾರವಾಗಲಿವೆ. ಇದು ಉಭಯ ರಾಷ್ಟçಗಳಿಗೂ ಲಾಭದಾಯಕವಾಗುವಂತಹ ಹಾಗೂ ದ್ವಿಪಕ್ಷೀಯ ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಒಪ್ಪಂದ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ತಿಳಿಸಿದೆ.











