Sunday, May 24, 2026
ರಾಜ್ಯಸುದ್ದಿ

ಕೊಯಮತ್ತೂರಲ್ಲಿ 10 ವರ್ಷದ ಬಾಲಕಿ ಕಿಡ್ನ್ಯಾಪ್ ಮಾಡಿ ಕೊಲೆ :ಸಿಎಂ ವಿಜಯ್ ಸರ್ಕಾರದ ವಿರುದ್ಧ ಡಿಎಂಕೆ ಕಿಡಿ – ಕಹಳೆ ನ್ಯೂಸ್

ಚೆನ್ನೈ: ಕೊಯಮತ್ತೂರಿನ  ಸುಲೂರು ಪ್ರದೇಶದ ಕಣ್ಣಂಪಾಳಯಂ ಸರೋವರದ ಬಳಿ ಗಾಯಗಳಿಂದ ಕುಡಿರುವ 10 ವರ್ಷದ ಬಾಲಕಿಯ ಶವ ಪತ್ತೆಯಾಗಿದೆ. ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿ ಕಿಡ್ನ್ಯಾಪ್ ಮತ್ತು ಕೊಲೆ ವಿಚಾರವಾಗಿ ಸಿಎಂ ವಿಜಯ್ ಸರ್ಕಾರದ ವಿರುದ್ಧ ಡಿಎಂಕೆ ಹರಿಹಾಯ್ದಿದೆ.

ಕಾರ್ತಿಕ್ ಮತ್ತು ಮೋಹನ್ ರಾಜ್ ಬಂಧಿತ ಆರೋಪಿಗಳು. ಬಾಲಕಿ ಸುಲೂರು ಪ್ರದೇಶದ ತನ್ನ ಮನೆಯ ಹತ್ತಿರ ದಿನಸಿ ಖರೀದಿಸಲು ಅಂಗಡಿಗೆ ಹೋಗಿದ್ದಳು. ಈ ವೇಳೆ ಕಿಡಿಗೇಡಿಗಳು ಆಕೆಯನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯಮಂತ್ರಿ ವಿಜಯ್ ಅವರಿಂದ ನ್ಯಾಯದ ಭರವಸೆ ಸಿಗುವವರೆಗೂ ನಾವು ಶವವನ್ನು ತೆಗೆದುಕೊಂಡು ಹೋಗುವುದಿಲ್ಲ. ಈ ರೀತಿಯ ಕೃತ್ಯಗಳು ಆಗಬಾರದು ಎಂದು ಬದಲಾವಣೆಗೆ ಮತ ಹಾಕಿದ್ದೇವೆ. ಆದರೆ, ಅವರು ಈಗ ಯಾವುದೇ ಹೇಳಿಕೆ ಅಥವಾ ಭರವಸೆ ನೀಡುತ್ತಿಲ್ಲ. ರಾಜ್ಯದಲ್ಲಿ ಹೊಸ ಸರ್ಕಾರ ಆಡಳಿತಕ್ಕೆ ಬಂದ ಹೊರತಾಗಿಯೂ, ಯಾವುದೇ ಬದಲಾವಣೆ ಆಗಿಲ್ಲ ಎಂದು ಬಾಲಕಿಯ ಪೋಷಕರು ಮತ್ತು ಸಂಬಂಧಿಕರು ಸುಲೂರು ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.

ಘಟನೆಯಲ್ಲಿ ಏನಾಗಿದೆ ಎಂದು ನಮಗೆ ತಿಳಿದಿಲ್ಲ. ಶುಕ್ರವಾರ ಸಂಜೆ ನಮಗೆ ತಡವಾಗಿ ಮಾಹಿತಿ ಸಿಕ್ಕಿತು. ಕಾಣೆಯಾದ ಬಾಲಕಿ ಸರೋವರದ ದಡದಲ್ಲಿ ಶವವಾಗಿ ಸಿಕ್ಕಿದ್ದಾಳೆ. ಕುಟುಂಬದ ಜೊತೆಗೆ ನೂರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ನ್ಯಾಯಕ್ಕಾಗಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ ಎಂದು ಸಂತ್ರಸ್ತೆ ಕುಟುಂಬದ ಸಂಬಂಧಿ ಸೆಂಥಿಲ್ ಕುಮಾರ್ ತಿಳಿಸಿದ್ದಾರೆ.

ಘಟನೆಯ ಮಾಹಿತಿ ತಿಳಿದ ಬೆನ್ನಲ್ಲೇ ತಮಿಳುನಾಡು ಪೊಲೀಸ್ ಮಹಾನಿರ್ದೇಶಕ ಸಂದೀಪ್ ರೈ ರಾಥೋಡ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ತಮಿಳುನಾಡು ಸಚಿವ ಎಂ.ಎಸ್. ಸಂಪತ್ ಅವರು ಇಎಸ್‍ಐ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾದರು. ಬಳಿಕ ಸಂಪತ್ ಅವರು ಘಟನೆಯ ಕುರಿತು ಮುಖ್ಯಮಂತ್ರಿಗಳ ಜೊತೆಗೆ ಮಾತನಾಡಿದ್ದೇನೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದಾರೆ.

ತಮಿಳುನಾಡಿನ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯ ಕುರಿತು ವಿಪಕ್ಷ ಡಿಎಂಕೆ, ಆಡಳಿತರೂಢ ಟಿವಿಕೆ ಸರ್ಕಾರದ ವಿರುದ್ಧ ಕಿಡಿಕಾರಿದೆ. ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡ ಕೇವಲ 12 ದಿನಗಳಲ್ಲಿ, ಲೈಂಗಿಕ ಹಿಂಸೆ, ಗಾಂಜಾ ಕಳ್ಳಸಾಗಣೆ, ಗೂಂಡಾಗಿರಿ, ಅಶಿಸ್ತು, ಕೊಲೆ ಸೇರಿದಂತೆ 30ಕ್ಕೂ ಹೆಚ್ಚು ಪ್ರಮುಖ ಘಟನೆಗಳು ನಡೆದಿವೆ. ಇದರಿಂದ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಮೇಲೆ ಗಂಭೀರ ಅನುಮಾನ ಹುಟ್ಟುಹಾಕಿದೆ ಎಂದು ಟಿವಿಕೆ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಗುಡುಗಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅಪ್ರಾಪ್ತೆಯ ಅಪಹರಣ ಮತ್ತು ಕೊಲೆಗೆ ಕಾರಣರಾದವರನ್ನು ಆದಷ್ಟು ಬೇಗ ತನಿಖೆಗೆ ಒಳಪಡಿಸಿ ಶಿಕ್ಷೆ ವಿಧಿಸಬೇಕು ಎಂದು ಉದಯನಿಧಿ ಸ್ಟಾಲಿನ್ ಆಗ್ರಹಿಸಿದ್ದಾರೆ.