ಏ.9ರಿಂದ 12ರವರೆಗೆ ಹನುಮಗಿರಿ ಬ್ರಹ್ಮಕಲಶೋತ್ಸವ ; ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದ್ದೇನು..!? – ಕಹಳೆ ನ್ಯೂಸ್

ಪುತ್ತೂರು: ಹನುಮಗಿರಿಯ ಕೋದಂಡ ರಾಮ- ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಏ.9ರಿಂದ 12ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಹೊಸ ಕಲ್ಪನೆಯಡಿ ಸಮಾಜಕ್ಕೆ ಸಂದೇಶ ಸಾರುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದರು.
ಹನುಮಗಿರಿ ಕ್ಷೇತ್ರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಹೊಸ ಗೋಪುರ ರಚನೆ, ಪಂಚಮುಖಿ ಆಂಜನೇಯ ಮತ್ತು ಕೋದಂಡರಾಮ ದೇವರ ಪೀಠಗಳಿಗೆ ಹಿತ್ತಾಳೆಯ ಕವಚ, ಸುಂದರ ವನ ನಿರ್ಮಾಣ ಮಾಡಲಾಗಿದೆ. ವಿಶಾಲವಾದ ಯಾಗ ಮಂಟಪ, ಯಾಗ ಕುಂಡಗಳ ರಚನೆ, ಎರಡು ಪ್ರತ್ಯೇಕ ಲವ-ಕುಶ ಹೆಸರಿನ ಸಾಂಸ್ಕೃತಿಕ ವೇದಿಕೆ, ಪಾಕಶಾಲೆ-ಭೋಜನಾಲಯ ವ್ಯವಸ್ಥೆ, ಹಸಿರುವಾಣಿ ಸಂಗ್ರಹಣಾ ಕೊಠಡಿಗಳ ವ್ಯವಸ್ಥೆ ಸೇರಿದಂತೆ ಬ್ರಹ್ಮಕಲಶೋತ್ಸವದ ಪೂರ್ವ ತಯಾರಿಗಳು ನಡೆದಿವೆ ಎಂದರು.
ಏ.8ರಂದು ಬೆಳಿಗ್ಗೆ ಉಗ್ರಾಣ ಮುಹೂರ್ತ, ಮಧ್ಯಾಹ್ನ 3 ಗಂಟೆಗೆ ಪುತ್ತೂರಿನ ಮಹಾಲಿಂಗೇಶ್ವರ ದೇವಳ ದಿಂದ ದರ್ಬೆವರೆಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಅಲ್ಲಿಂದ ವಾಹನ ಜಾಥಾದ ಮೂಲಕ ಹನುಮಗಿರಿಗೆ ಹಸಿರುವಾಣಿ ಸಮರ್ಪಿಸಲಾಗುವುದು. ಗ್ರಾಮ ಪರ್ಯಟನೆ ಮಾಡುತ್ತಿರುವ ಶ್ರೀರಾಮ- ಹನುಮ ಜ್ಯೋತಿ ರಥ ಯಾತ್ರೆಯು ಏ.9ರಂದು ಮಧ್ಯಾಹ್ನ 3 ಗಂಟೆಗೆ ಹನುಮಗಿರಿ ಪ್ರವೇಶಿಸಲಿದ್ದು, ಈಶ್ವರಮಂಗಲ ಪಂಚಲಿಂಗೇಶ್ವರ ದೇವಳದಿಂದ ಹನುಮಗಿರಿವರೆಗೆ ರಥಯಾತ್ರೆ ಮೆರವಣಿಗೆ ನಡೆಯಲಿದೆ ಎಂದರು.
ಏ. 10ರಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ನೂತನ ಗೋಪುರ ಉದ್ಘಾಟಿಸಿ, ಅಷ್ಟೋತ್ತರ ಶತನಾರಿಕೇಳ ಯಾಗದಲ್ಲಿ ಪಾಲ್ಗೊಳ್ಳುವರು. ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಭಾಗವಹಿಸುವರು. ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಯಾಗ ಶಾಲೆ ಉದ್ಘಾಟಿಸುವರು. ಏ. 11ರಂದು ಶ್ರೀರಾಮ ತಾರಕ ಯಾಗವು 10 ಕುಂಡಗಳಲ್ಲಿ ನಡೆಯಲಿದ್ದು, 12ರಂದು ಬೆಳಿಗ್ಗೆ 8.20ರಿಂದ 10.20ರ ವೃಷಭ ಲಗ್ನ ಮುಹೂರ್ತದಲ್ಲಿ ಕೋದಂಡರಾಮ ಮತ್ತು ಪಂಚಮುಖಿ ಆಂಜನೇಯ ದೇವರ ಪ್ರತಿಷ್ಠೆ, ಪರಿವಾರ ದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ನಡೆಯಲಿದೆ. ರಾತ್ರಿ ದೇವರ ಉತ್ಸವ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆಯೊಂದಿಗೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಸಂಪನ್ನಗೊಳ್ಳುವುದು. ಬ್ರಹ್ಮಕಲಶೋತ್ಸವದಲ್ಲಿ ಕಂಚಿಕಾಮಕೋಟಿ ಶ್ರೀಗಳು, ಸುಬ್ರಹ್ಮಣ್ಯ, ಎಡನೀರು, ಒಡಿಯೂರು, ಕನ್ಯಾನದ ಪೀಠಾಧಿಪತಿಗಳು, ಸಾಧು-ಸಂತರು, ಮಠಾಧೀಶರು, ರಾಜವಂಸಸ್ಥರು ಭಾಗವಹಿಸುವರು ಎಂದರು.
ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ನೃತ್ಯ, ಭರತನಾಟ್ಯ, ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಾ ತಂಡಗಳಿಂದ ಪ್ರತಿ ದಿನ ಬೆಳಿಗ್ಗೆಯಿಂದ ರಾತ್ರಿ 12ರವರೆಗೆ ನಡೆಯಲಿವೆ. 12ರಂದು ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ. ಏ.8ರಿಂದ 12ರವರೆಗೆ ಸುಮಾರು 300 ತಂಡಗಳಿಂದ ಬೆಳಿಗ್ಗೆಯಿಂದ ರಾತ್ರಿವರೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.
ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ನೃತ್ಯ, ಭರತನಾಟ್ಯ, ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಾ ತಂಡಗಳಿಂದ ಪ್ರತಿ ದಿನ ಬೆಳಿಗ್ಗೆಯಿಂದ ರಾತ್ರಿ 12ರವರೆಗೆ ನಡೆಯಲಿವೆ. 12ರಂದು ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ. ಏ.8ರಿಂದ 12ರವರೆಗೆ ಸುಮಾರು 300 ತಂಡಗಳಿಂದ ಬೆಳಿಗ್ಗೆಯಿಂದ ರಾತ್ರಿವರೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.
ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ್ ಮೂಡೆತ್ತಾಯ, ಸ್ವಾಗತ ಸಮಿತಿ ಅಧ್ಯಕ್ಷ ರವೀಶ್ ಪಡುಮಲೆ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ಮುರಳೀಕೃಷ್ಣ ಹಸಂತಡ್ಕ, ಬೂಡಿಯಾರ್ ರಾಧಾಕೃಷ್ಣ ರೈ, ರವಿಕಿರಣ್ ಶೆಟ್ಟಿ ಬೆದ್ರಾಡಿ, ಶಶಿಕುಮಾರ್ ರೈ ಬಾಲ್ಗೊಟ್ಟು, ಶ್ರೀರಾಮ ಪಕ್ಕಳ ಕರ್ನೂರುಗುತ್ತು, ಪ್ರಧಾನ ಕಾರ್ಯದರ್ಶಿಗಳಾದ ಆರ್.ಸಿ.ನಾರಾಯಣ ರೆಂಜ, ನಹುಷ ಪಳನೀರು ಸುದ್ದಿಗೋಷ್ಠಿಯಲ್ಲಿ ಇದ್ದರು.









