ಹಾರ್ಮುಜ್ ದಾಟಲು ಗ್ರೀನ್ ಸಿಗ್ನಲ್ : ಭಾರತಕ್ಕೆ ಬಂತು LPG ಟ್ಯಾಂಕರ್, ಪೈನ್ ಗ್ಯಾಸ್ ಹೊತ್ತ ಮತ್ತೆರಡು ಹಡಗು -ಕಹಳೆ ನ್ಯೂಸ್

ನವದೆಹಲಿ/ಟೆಹ್ರಾನ್: ಹಾರ್ಮುಜ್ ಜಲಸಂಧಿಯಲ್ಲಿ ಕ್ಲಿಯರೆನ್ಸ್ ಪಡೆದ ಬಳಿಕ ಭಾರತೀಯ ಎಲ್ಪಿಜಿ ಟ್ಯಾಂಕರ್ ಹೊತ್ತ ʻಜಗ್ ವಸಂತ್ʼ ಹಡಗು ಮತ್ತು ಪೈನ್ ಗ್ಯಾಸ್ ಹೊತ್ತ ಹಡಗು ಸುರಕ್ಷಿತವಾಗಿ ಭಾರತ ತಲುಪಿವೆ. ಇನ್ನೂ ಎರಡು ಹಡಗು ಮಾರ್ಗಮಧ್ಯದಲ್ಲಿದ್ದು, ಸುಮಾರು 20 ಹಡಗುಗಳು ಅನುಮತಿಗಾಗಿ ಕಾಯುತ್ತಾ ಹಾರ್ಮುಜ್ ಜಲಸಂಧಿಯಲ್ಲೇ ಸಿಲುಕಿಕೊಂಡಿವೆ.
ಪೈನ್ ಗ್ಯಾಸ್ ಟ್ಯಾಂಕರ್ ಹೊತ್ತ 2ನೇ ಹಡಗು ಸಹ ಶುಕ್ರವಾರ ರಾತ್ರಿಯೇ ಭಾರತದ ಗಡಿ ತಲುಪಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ನಿಂದ ಬಾಡಿಗೆಗೆ ಪಡೆಯಲಾದ ಈ ಹಡಗು ಏಪ್ರಿಲ್ 2 ರಂದು ಒಡಿಶಾದ ಧಮ್ರಾ ಬಂದರನ್ನು ಪ್ರವೇಶಿಸುವ ನಿರೀಕ್ಷೆಯಿದೆ.
ಕಡಲ ಸಂರಕ್ಷಣಾ ಪಡೆಗಳ ಮಾಹಿತಿ ಪ್ರಕಾರ, ಭಾರತೀಯ ಧ್ವಜ ಹೊಂದಿರುವ ಇತರ 3 LPG ಹಡಗುಗಳಾದ ಜಗ್ ವಿಕ್ರಮ್, ಗ್ರೀನ್ ಆಶಾ ಮತ್ತು ಗ್ರೀನ್ ಸಾನ್ವಿ – ಮಿನಾ ಸಕ್ರ್ ಬಳಿ ಲಂಗರು ಹಾಕಿವೆ. ಜಲಸಂಧಿಯ ಮೂಲಕ ಹಾದುಹೋಗಲು ಭಾರತೀಯ ನೌಕಾಪಡೆಯಿಂದ ಸೂಚನೆಗಳಿಗಾಗಿ ಕಾಯುತ್ತಿವೆ ಎಂದು ತಿಳಿದುಬಂದಿದೆ.
ಕಳೆದ ಫೆಬ್ರವರಿ 28 ಎಂದು ಇರಾನ್ ಯುದ್ಧ ಪ್ರಾರಂಭವಾದಾಗಿನಿಂದ ಈವರೆಗೆ 4 LPG ಮತ್ತು 2 ಕಚ್ಚಾ ತೈಲ ಟ್ಯಾಂಕರ್ಗಳು ಹಾರ್ಮುಜ್ ಜಲಸಂಧಿ ದಾಟಿ ಭಾರತ ಪ್ರವೇಶಿಸಿವೆ. ಇನ್ನೂ ಸುಮಾರು 18 ರಿಂದ 20 ಭಾರತೀಯ ಹಡಗುಗಳು ಕೊಲ್ಲಿಯಲ್ಲಿ ಸಿಲುಕಿಕೊಂಡಿವೆ, ಇದರಲ್ಲಿ 677 ಕ್ಕೂ ಹೆಚ್ಚು ಭಾರತೀಯ ಸಿಬ್ಬಂದಿ ಇದ್ದಾರೆ ಎಂದು ವರದಿಗಳು ತಿಳಿಸಿವೆ.









