ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಣ ಸಂಸ್ಥಾನ ಆಶ್ರಯದಲ್ಲಿ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ಮಾತೆಯವರಿಗಾಗಿ ಸಪ್ತಶಕ್ತಿ ಸಂಗಮ – ಕಹಳೆ ನ್ಯೂಸ್

ಕಲ್ಲಡ್ಕ : ನ. 28 ರಂದು ವಿದ್ಯಾ ಭಾರತಿ ಅಖಿಲ ಭಾರತ ಶಿಕ್ಷಣ ಸಂಸ್ಥಾನ ಆಶ್ರಯದಲ್ಲಿ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಮಾತೆಯವರಿಗಾಗಿ ಸಪ್ತಶಕ್ತಿ ಸಂಗಮ ಕಾರ್ಯಕ್ರಮವನ್ನು ನಡೆಸಲಾಯಿತು. ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕರಾದ ಶ್ರೀಮತಿ ಅನ್ನಪೂರ್ಣ ಮಾತಾಜಿ ಅವರು ಮಾತನಾಡಿ ಕುಟುಂಬ ಹಾಗೂ ಪರಿಸರದಲ್ಲಿ ಮಾತೆಯರ ಪಾತ್ರ ಬಹಳ ಮುಖ್ಯವಾಗಿದ್ದು ಮಾತೆಯವರು ಮಾಡುವ ಪ್ರತಿಯೊಂದು ಕೆಲಸವು ಮಕ್ಕಳಿಗೆ ಪ್ರೇರಣೆಯಾಗುವಂತಿರಬೇಕು ಎಂದರು. ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕರಾದ ಶ್ರೀಮತಿ ರಾಜೇಶ್ವರಿ ಮಾತಾಜಿ ಅವರು ಭಾರತದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷರಾದ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಅಕ್ಷತಾ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ವೀಣಾ ಮಾತೃಭಾರತಿ ಸದಸ್ಯರು, ಶ್ರೀಮತಿ ರೇಖಾ ಶರ್ಮ ಮಾತೃಭಾರತಿ ಸದಸ್ಯರು ಉಪಸ್ಥಿತರಿದ್ದರು.
ಉಪನ್ಯಾಸಕಿಯಾದ ಶ್ರೀಮತಿ ಚೈತನ್ಯ ಪ್ರಾಸ್ತವಿಕವಾಗಿ ಮಾತನಾಡಿದರು. ಇದಕ್ಕೂ ಮೊದಲು ಮಾತೆಯರನ್ನು ಅರಿಶಿನ ಕುಂಕುಮ ನೀಡಿ ಆರತಿ ಬೆಳಗಿಸಿ ಬರಮಾಡಿಕೊಳ್ಳಲಾಯಿತು. ಭಾರತ ಮಾತೆಗೆ ದೀಪ ಪ್ರಜ್ವಲನೆ ಹಾಗೂ ಪುಷ್ಪಾರ್ಚನೆ ಮಾಡಿ ಅಗ್ನಿಹೋತ್ರದೊಂದಿಗೆ ಸರಸ್ವತಿ ವಂದನೆಯನ್ನು ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
158ಮಾತೆಯರು ಭಾಗಿ: ಈ ಸಂದರ್ಭ ಸಪ್ತ ಶಕ್ತಿಗಳನ್ನು ಜಾಗೃತಗೊಳಿಸಲು ಮಾತೆಯರು ಸಂಕಲ್ಪ ಮಾಡಿದರು. ಒಟ್ಟು 158 ಮಾತೆಯರು ಪಾಲ್ಗೊಂಡಿದ್ದರು.
ವೇಷಭೂಷಣಗಳ ಜೊತೆ ಸಂದೇಶ: ವಿದ್ಯಾರ್ಥಿಗಳು ವಿವಿಧ ಧೀರ ನಾರಿಯರಾದ ಒನಕೆ ಓಬವ್ವ, ಸಂತ ಮೀರಾಬಾಯಿ, ಕಿತ್ತೂರು ರಾಣಿ ಚೆನ್ನಮ್ಮ ಇತ್ಯಾದಿ ವೀರ ಮಹಿಳೆಯರ ವೇಷಭೂಷಣಗಳನ್ನು ಧರಿಸಿ ಸ್ಪೂರ್ತಿದಾಯಕ ಸಂದೇಶವನ್ನು ಸಾರಿದರು. ಕಾರ್ಯಕ್ರಮವನ್ನು ಉಪನ್ಯಾಸಕಿ ಕುಮಾರಿ ಶ್ವೇತಾ ನಿರೂಪಿಸಿದರು, ನಮ್ಯ ಶ್ರೀ ಸ್ವಾಗತಿಸಿ, ಶೈಲಿನಿ ವಂದಿಸಿದರು.









