ದೆಹಲಿ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಫೋಟ 9 ಜನ ಪೊಲೀಸರ ಸಾವು, ಹಲವರಿಗೆ ಗಂಭೀರ ಗಾಯ-ಕಹಳೆ ನ್ಯೂಸ್

ದೆಹಲಿಯಲ್ಲಿ ಬಾಂಬ್ ಸ್ಫೋಟವಾಗಿ ಕೇವಲ ಒಂದು ವಾರದ ಒಳಗಾಗಿಯೇ ದೇಶದ ಮುಕುಟ ಎಂದೇ ಹೇಳುವ ಜಮ್ಮು ಮತ್ತು ಕಾಶ್ಮೀರದ ಭಾಗದಲ್ಲೂ ಬಾಂಬ್ ಸ್ಫೋಟ ಮಾದರಿಯ ಸ್ಫೋಟವೊಂದು ಸಂಭವಿಸಿದ್ದು, ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದರು ಮತ್ತು 29 ಜನರು ಗಾಯಗೊಂಡಿದ್ದಾರೆ.
ಶುಕ್ರವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಬಳಿಯ ನೌಗಮ್‌ನಲ್ಲಿರುವ ಪೊಲೀಸ್ ಠಾಣೆಯಲ್ಲಿ ಸಂಗ್ರಹಿಸಲಾಗಿದ್ದ ಸ್ಫೋಟಕಗಳ ಬೃಹತ್ ರಾಶಿ ಸ್ಫೋಟಗೊಂಡಿದೆ ಎಂದು ಹೇಳಲಾಗಿದೆ.
ಮೃತರಲ್ಲಿ ಹೆಚ್ಚಿನವರು ಪೊಲೀಸರು ಎಂದು ಗುರುತಿಸಲಾಗಿದೆ. ಅಲ್ಲದೇ ಶ್ರೀನಗರ ಆಡಳಿತದ ಇಬ್ಬರು ಅಧಿಕಾರಿಗಳು ಸಹ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ. ವಿಧಿವಿಜ್ಞಾನ ತಂಡದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು ಸ್ಥಳ ಪರಿಶೀಲನೆ ಮಾಡಿದ್ದಾರೆ. ಈಚೆಗೆ ಹರಿಯಾಣದ ಫರಿದಾಬಾದ್‌ನಿಂದ ತರಲಾಗಿದ್ದ ಸ್ಫೋಟಕ ವಸ್ತುಗಳನ್ನು ನಿರ್ವಹಿಸುತ್ತಿದ್ದಾಗ ದೆಹಲಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು ಎಂದು ಹೇಳಲಾಗಿತ್ತು.
ಗಾಯಾಳುಗಳನ್ನು ಭಾರತೀಯ ಸೇನೆಯ 92 ಬೇಸ್ ಆಸ್ಪತ್ರೆ ಮತ್ತು ಶೇರ್-ಇ-ಕಾಶ್ಮೀರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ನೌಗಮ್ ತಲುಪಿದ್ದಾರೆ. ದೆಹಲಿ ಬಾಂಬ್ ಸ್ಫೋಟದ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ಭಾಗದಲ್ಲೂ ಸ್ಫೋಟ ಸಂಭವಿಸಿರುವುದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ವಿವಿಧ ಸ್ಥಳಗಳಲ್ಲಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್‌ನ ಪೋಸ್ಟರ್‌ಗಳ ಪ್ರಕರಣವನ್ನು ಭೇದಿಸಿದ್ದು ನೌಗಮ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳೇ ಆಗಿದ್ದಾರೆ.
ಈ ಹಿನ್ನೆಲೆಯಲ್ಲಿ ಈ ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಈ ಸ್ಫೋಟ ನಡೆಸಲಾಗಿರುವ ಶಂಕೆ ವ್ಯಕ್ತವಾಗಿದೆ. ಈ ಪೋಸ್ಟರ್‌ಗಳು ದೇಶದಲ್ಲಿ ವೈಟ್ ಕಾಲರ್ ಟೆರರಿಸಂ ಆಕ್ಟೀವ್ ಆಗಿರುವುದನ್ನು ಸೂಚಿಸಿತ್ತು. ಉನ್ನತ ವಿದ್ಯಾಭ್ಯಾಸ ಮಾಡಿರುವವರು ಈ ಮಾದರಿಯ ಟೆರರಿಸಂನಲ್ಲಿ ಭಾಗಿಯಾಗಿರುವುದು ಭಾರೀ ಆತಂಕಕ್ಕೆ ಕಾರಣವಾಗಿತ್ತು.
ಇನ್ನು ಅಕ್ಟೋಬರ್‌ನಲ್ಲಿ ಬಂಧಿತ ವೈದ್ಯರಲ್ಲಿ ಒಬ್ಬನಾದ ಅದೀಲ್ ಅಹ್ಮದ್ ರಾಥರ್, ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಮತ್ತು ಹೊರಗಿನವರ ಮೇಲೆ ದೊಡ್ಡ ದಾಳಿಗಳ ಬಗ್ಗೆ ಎಚ್ಚರಿಕೆ ನೀಡುವ ಪೋಸ್ಟರ್‌ಗಳನ್ನು ಅಂಟಿಸುತ್ತಿರುವುದು ವರದಿಯಾಗಿತ್ತು









