ಉಡುಪಿಯ ಕಲಾಲೋಕದ ಆಡುಂಬೊಲವಾಗಿರುವ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜು. 25 ಮತ್ತು 26ರಂದು “ಸಂಸ್ಕೃತಿ ಸಂಭ್ರಮ”ದ ಸಡಗರ-ಕಹಳೆ ನ್ಯೂಸ್

ಉಡುಪಿ : ಕರಾವಳಿಯ ಉಡುಪಿ ನಗರದೊಳಗೆ ಅಷಾಢದ ಮಳೆಯ ನಡುವೆ ಸಂಸ್ಕೃತಿ ಸಂಭ್ರಮದ ರಂಗೇರುತ್ತಿದೆ. ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡಮಿ, ಕರ್ನಾಟಕ ಜಾನಪದ ಅಕಾಡಮಿ ಮತ್ತು ಕರ್ನಾಟಕ ನಾಟಕ ಅಕಾಡಮಿ ಹಾಗೂ ರಂಗಭೂಮಿ (ರಿ.) ಉಡುಪಿ, ಇವರೆಲ್ಲರ ಸಹಯೋಗದಲ್ಲಿ ಗೊಂಬೆಯಾಟ, ಜಾನಪದ ಕಲೆ, ಸಂಗೀತ, ನಾಟಕಗಳು ಮೇಲೈಸಿದ ಸಮರಸದ ರಸಪಾಕ ಸಿದ್ಧವಾಗುತ್ತಿದೆ. ಉಡುಪಿಯ ಕಲಾಲೋಕದ ಆಡುಂಬೊಲವಾಗಿರುವ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜುಲೈ 25 ಮತ್ತು 26ರಂದು ಮಧ್ಯಾಹ್ನದಿಂದ ಇಳಿ ಸಂಜೆಯವರೆಗೆ “ಸಂಸ್ಕೃತಿ ಸಂಭ್ರಮ ಸಾಕಾರಗೊಳ್ಳಲಿದೆ.
ಪ್ರಥಮ ದಿನದ ಮೊದಲ ಕಾರ್ಯಕ್ರಮವಾಗಿ ಮಧ್ಯಾಹ್ನ 2 ಗಂಟೆಗೆ ಸುಪ್ರಸಿದ್ದ ಕಾಸರಗೋಡು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ (ರಿ.)ದವರು ಶ್ರೀ ಕೆ.ವಿ. ರಮೇಶ್ ನಿರ್ದೇಶನದಲ್ಲಿ ನಡೆಸಿಕೊಡುವ ನರಕಾಸುರ ವಧೆ ಮತ್ತು ಗರುಡ ಗರ್ವಭಂಗ ಎಂಬ ತೆಂಕುತಿಟ್ಟು ಯಕ್ಷಗಾನ ಗೊಂಬೆಯಾಟ ನಡೆಯಲಿದೆ. “ಸಂಸ್ಕೃತಿ ಸಂಭ್ರಮ’ದ ಉದ್ಘಾಟನೆಯನ್ನು ಮಾಹೆ, ಮಣಿಪಾಲದ ಸಹಕುಲಾಧಿಪತಿಗಳು ಮತ್ತು ರಂಗಭೂಮಿ (ರಿ.) ಉಡುಪಿಯ ಗೌರವಾಧ್ಯಕ್ಷರಾಗಿರುವ ಡಾ. ಎಚ್. ಎಸ್. ಬಲ್ಲಾಳರು ನಡೆಸಿಕೊಡಲಿದ್ದು, ಕರ್ನಾಟಕ ಯಕ್ಷಗಾನ ಅಕಾಡಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ., ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಉದ್ಯಮಿ ರವೀಂದ್ರ ಶೆಟ್ಟಿ ಕಡೆಕಾರ್, ಕರ್ನಾಟಕ ನಾಟಕ ಅಕಾಡಮಿಯ ಜಿಲ್ಲಾ ಸಂಚಾಲಕರು ಮತ್ತು ಭೂಮಿಗೀತ ಸಾಂಸ್ಕೃತಿಕ ವೇದಿಕೆ, ಪಟ್ಟ ಉಡುಪಿಯ ಅಧ್ಯಕ್ಷರಾದ ಸಂತೋಷ ನಾಯಕ್ ಪಟ್ಟ ಮತ್ತು ಉಡುಪಿ ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವನಿತಾ ಮಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ನಾಟಕ ಅಕಾಡಮಿಯ ಅಧ್ಯಕ್ಷರಾಗಿರುವ ಪ್ರಖ್ಯಾತ ರಂಗಕರ್ಮಿ ಡಾ. ಕೆ. ವಿ. ನಾಗರಾಜಮೂರ್ತಿಯವರಿಗೆ ಗೌರವಾರ್ಪಣೆ ಸಲ್ಲಿಸಲಾಗುವುದು. ಜಾನಪದ ಕಲಾ ಪ್ರದರ್ಶನದಲ್ಲಿ ಶಿವಮೊಗ್ಗ ಜಿಲ್ಲೆಯ ಶ್ರೀ ಟಾಕಪ್ಪ ಮತ್ತು ತಂಡದವರಿಂದ ಡೊಳ್ಳು ಕುಣಿತ ಹಾಗೂ ಬೆಂಗಳೂರು ನಗರ ಜಿಲ್ಲೆಯ ಶ್ರೀ ಮಹದೇವಮೂರ್ತಿ ಮತ್ತು ತಂಡದವರಿಂದ ಕಂಸಾಳೆ ನೃತ್ಯಗಳು ಪ್ರದರ್ಶಿತಗೊಳ್ಳಲಿವೆ.
ಸಂಸ್ಕೃತಿ ಸಂಭ್ರಮ’ದ ಎರಡನೆಯ ದಿನ ಸಂಜೆ 4 ಗಂಟೆಗೆ ಸಂಗೀತ ವಿದ್ವಾನ್ ಶ್ರೀ ಪಾಡಿಗಾರ್ ಲಕ್ಷ್ಮೀನಾರಾಯಣ ಉಪಾಧ್ಯ ಮತ್ತು ಬಳಗದವರ ಸಂಗೀತ ಸುಧೆಯೊಂದಿಗೆ ಆರಂಭಗೊಳ್ಳಲಿದೆ. ಜೊತೆಗೆ ರಂಗಭೂಮಿ (ರಿ.) ಉಡುಪಿ ತಂಡದ ಸುಪ್ರಸಿದ್ದ ನಾಟಕ ಕಾಲಚಕ್ರ ಪ್ರದರ್ಶನಗೊಳ್ಳಲಿದೆ. ಪ್ರಖ್ಯಾತ ಮರಾಠಿ ನಾಟಕಕಾರ ಜಯವಂತ ದಳ್ಳಿ ರಚಿಸಿದ ಹಾಗೂ ಹೆಚ್. ಕೆ. ಕರ್ಕೇರರವರು ಕನ್ನಡಕ್ಕೆ ಅನುವಾದಿಸಿದ ಈ ಪ್ರಸಿದ್ಧ ಕೃತಿಯ ರಂಗಪ್ರಯೋಗವನ್ನು ಪ್ರದೀಪ್‌ಚಂದ್ರ ಕುತ್ಪಾಡಿಯವರು ನಿರ್ದೇಶಿಸಿದ್ದಾರೆ. ಶ್ರೀಪಾದ ಹೆಗಡೆ ಸಹ ನಿರ್ದೇಶನ, ಗೀತಂ ಗಿರೀಶ್ ಸಂಗೀತ ಹಾಗೂ ನಿತಿನ್ ಪರಂಪಳ್ಳಿಯವರ ಬೆಳಕಿನ ವಿನ್ಯಾಸದೊಂದಿಗೆ, ನುರಿತ ರಂಗಕಲಾವಿದರ ಪ್ರಸ್ತುತಿಯಲ್ಲಿ ಮೂಡಿಬರಲಿರುವ ಈ ನಾಟಕವು ಸಮಕಾಲೀನ ಸಮಾಜಕ್ಕೆ ಪ್ರಸ್ತುತವಾದ ಕಥಾ ಹಂದರವನ್ನು ಹೊಂದಿದೆ. ಈ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ.ನಿ. ಬೀ. ವಿಜಯ ಬಲ್ಲಾಳರು ಉದ್ಘಾಟಿಸಲಿದ್ದು, ಕರ್ನಾಟಕ ಯಕ್ಷಗಾನ ಅಕಾಡಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಖ್ಯಾತ ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಜಾನಪದ ವಿದ್ವಾಂಸರು ಮತ್ತು ಕರ್ನಾಟಕ ಜಾನಪದ ಅಕಾಡಮಿಯ ಸದಸ್ಯರಾದ ಸಯ್ಯದ್ ಜಮೀರುಲ್ಲಾ ಷರೀಫ್, ಬಂಟರ ಯಾನೆ ನಾಡವರ ಮಾತೃ ಸಂಘ (ರಿ.) ಉಡುಪಿಯ ಉಪ ಸಂಚಾಲಕರಾದ ಕೆ. ದಿನೇಶ್ ಹೆಗ್ಡೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿಯ ಸಹಾಯಕ ನಿರ್ದೇಶಕರಾದ ಪೂರ್ಣಿಮಾ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ಜಾನಪದ ಅಕಾಡಮಿಯ ಅಧ್ಯಕ್ಷರಾಗಿರುವ ಖ್ಯಾತ ಜಾನಪದ ವಿದ್ವಾಂಸ ಗೊಲ್ಲಹಳ್ಳಿ ಶಿವಪ್ರಸಾದ್‌ರವರಿಗೆ ಗೌರವ ಸಮರ್ಪಣೆ ನಡೆಯಲಿದೆ.
ಈ ವೈವಿಧ್ಯಮಯ ರಂಗಕಲೆಗಳ ಅಪರೂಪದ ಸಂಗಮವಾಗಿರುವ ಸಂಸ್ಕೃತಿ ಸಂಭ್ರಮದಲ್ಲಿ ಊರು, ಪರವೂರುಗಳ ಕಲಾರಸಿಕರು ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಯಾಗಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ಕಾರ್ಯಕ್ರಮದ ಸಂಚಾಲಕರಾದ ಪೃಥ್ವಿ ರಾಜೇಶ್ ಕುಮಾರ್, ಪ್ರದೀಪ್ ಚಂದ್ರ ಕುತ್ಪಾಡಿ ಪ್ರಧಾನ ಕಾರ್ಯದರ್ಶಿ ರಂಗಭೂಮಿ (ರಿ.) ಉಡುಪಿ. ರವಿರಾಜ ನಾಯಕ್ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಜಾನಪದ ಪರಿಷತ್ (ರಿ.)ಉಡುಪಿ, ಎನ್. ಆರ್ ಬಲ್ಲಾಳ್ ಉಪಾಧ್ಯಕ್ಷರು ರಂಗಭೂಮಿ (ರಿ.) ಉಡುಪಿ, ಶ್ರೀಪಾದ ಹೆಗಡೆ, ಜೊತೆ ಕಾರ್ಯದರ್ಶಿ ರಂಗಭೂಮಿ (ರಿ.) ಉಡುಪಿ ಮೊದಲಾದವರು ಉಪಸ್ಥಿತರಿದ್ದರು.









