
ಕುಂದಾಪುರ: ಮಂಗಳವಾರ ಬೆಳಿಗ್ಗೆ ಸುಮಾರು 9.20 ಕ್ಕೆ ವೇಳೆಯಲ್ಲಿ ನಡೆದ ಮೀನುಗಾರಿಕಾ ದೋಣಿ ದುರಂತದಲ್ಲಿ ಓರ್ವ ಮೀನುಗಾರರನ್ನು ರಕ್ಷಣೆ ಮಾಡಿದ ಹಾಗೂ ಮೂವರು ಮೀನುಗಾರರು ನಾಪತ್ತೆಯಾದ ಘಟನೆ ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ನಡೆದಿದೆ.
ಮೀನುಗಾರಿಕೆಗೆಂದು ಗಂಗೊಳ್ಳಿಯಿಂದ ಅರಬ್ಬಿ ಕಡಲಿನ ಕಡೆಗೆ ನಾಲ್ವರ ತಂಡವಿದ್ದ ಮೀನುಗಾರರು, ಮೀನುಗಾರಿಕೆಗೆಂದು ತೆರಳಿದ್ದರು. ಈ ವೇಳೆ ಸಮುದ್ರದಲ್ಲಿ ಭಾರಿ ತುಫಾನ್ ಹಾಗೂ ಗಾಳಿಯ ಒತ್ತಡದ ಕಾರಣದಿಂದ ಮೀನುಗಾರಿಕೆ ನಡೆಸದೆ ಹಿಂದಿರುಗುತ್ತಿದ್ದಾಗ ಗಂಗೊಳ್ಳಿ ಅಳಿವೆಯ ಹೊರ ಭಾಗದಲ್ಲಿ ದೋಣಿ ಮಗುಚಿ ದುರಂತ ಸಂಭವಿಸಿದೆ.
ಈ ವೇಳೆ ದೋಣಿಯಲ್ಲಿ ಇದ್ದ ಸಂತೋಷ ಖಾರ್ವಿ ಎನ್ನುವವರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಉಳಿದ ಮೂವರು ಮೀನುಗಾರರಾದ ಸಿಪಾಯಿ ಸುರೇಶ್ ಖಾರ್ವಿ, ಜಗನ್ನಾಥ್ ಖಾರ್ವಿ ಹಾಗೂ ರೋಹಿತ್ ಖಾರ್ವಿ ಎನ್ನುವವರು ನೀರು ಪಾಲಾಗಿದ್ದಾರೆ. ನಾಪತ್ತೆಯಾಗಿರುವ ಮೀನುಗಾರರು ಹುಡುಕಾಟ ನಡೆಸಲಾಗುತ್ತಿದೆ.
ಕರಾವಳಿ ಕಾವಲು ಪಡೆ, ಗಂಗೊಳ್ಳಿ ಪೊಲೀಸರು, ಸ್ಥಳೀಯ ಮೀನುಗಾರರು ಸಹಕಾರದಿಂದ ನಾಪತ್ತೆಯಾದ ಮೀನುಗಾರರು ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಂಗಳವಾರ ಮುಂಜಾನೆಯಿಂದಲೇ ಭಾರಿ ವರ್ಷಧಾರೆಯಾಗುತ್ತಿದ್ದು, ಭಾರಿ ಗಾಳಿಯೂ ಇರುವುದರಿಂದ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಏಳುತ್ತಿದ್ದು, ಸುಗಮ ಕಾರ್ಯಾಚರಣೆಗೆ ತೊಡಕಾಗಿದೆ. ದೋಣೀಯಲ್ಲಿನ ನಾಲ್ವರು ಮೀನುಗಾರರು ಗಂಗೊಳ್ಳಿಯವರು ಎಂದು ಸ್ಥಳೀಯ ಮೀನುಗಾರ ಮುಖಂಡ ರಾಮಪ್ಪ ಖಾರ್ವಿ ‘ ತಿಳಿಸಿದ್ದಾರೆ









