
ಬೆಂಗಳೂರು: ಜೂನ್ 12ರಂದು ಅಹ್ಮದಾಬಾದ್‌ನಲ್ಲಿ ನಡೆದ ಏರ್‌ಇಂಡಿಯಾ ( ಎಐ 171 ) ವಿಮಾನ ದುರಂತ ಸಂಭವಿಸಿದ್ದು, ವಿಮಾನದಲ್ಲಿದ್ದ 12 ಸಿಬ್ಬಂದಿ ಸೇರಿದಂತೆ ಒಟ್ಟು 242 ಜನರಲ್ಲಿ ಓರ್ವ ಮಾತ್ರ ಅಚ್ಚರಿಯ ರೀತಿಯಲ್ಲಿ ಬದುಕುಳಿದಿದ್ದಾರೆ.
ವಿಶ್ವಾಸ್‌ಕುಮಾರ್ ರಮೇಶ್ ಎಂಬಾತ ಈ ದುರಂತದಲ್ಲಿ ಬದುಕುಳಿದಿರುವ ಏಕೈಕ ಪ್ರಯಾಣಿಕನಾಗಿದ್ದು, ಸದ್ಯ ಅಹ್ಮದಾಬಾದ್‌ನ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯಲ್ಲಿ ಮೃತಪಟ್ಟ ಎಲ್ಲ 241 ಪ್ರಯಾಣಿಕರಿಗೂ ಟಾಟಾ ಗ್ರೂಪ್ಸ್ ತಲಾ ಒಂದು ಕೋಟಿ ರೂಪಾಯಿ ಪರಿಹಾರ ಘೋಷಿಸಿದೆ ಹಾಗೂ ಗಾಯಗೊಂಡ ಹಾಸ್ಟೆಲ್ ವಿದ್ಯಾರ್ಥಿಗಳ ಚಿಕಿತ್ಸೆಗೂ ಧನಸಹಾಯ ಮಾಡಿದೆ.
ಇನ್ನು ಘಟನೆಯಲ್ಲಿ ಬದುಕುಳಿದ ವಿಶ್ವಾಸ್‌ಕುಮಾರ್ ರಮೇಶ್‌ಗೆ ಇದೀಗ ವಿಜಯ್ ಮಲ್ಯ ಪರಿಹಾರ ಘೋಷಿಸಿದ್ದಾರೆ ಎಂಬ ಟ್ವೀಟ್ ಹರಿದಾಡಿದೆ. ಏರ್‌ಇಂಡಿಯಾ ದುರಂತದಲ್ಲಿ ಬದುಕುಳಿದ ಓರ್ವನಿಗೆ ತಮ್ಮ ಮಲ್ಯ ಫೌಂಡೇಷನ್ ವತಿಯಿಂದ 11 ಲಕ್ಷ ರೂಪಾಯಿಗಳನ್ನು ಘೋಷಿಸಿದೆ ಎಂಬ ಟ್ವೀಟ್ ಡಾ ವಿಜಯ್ ಮಲ್ಯ ಎಂಬ ಖಾತೆಯಿಂದ ಬಂದಿದೆ.
30 ಸಾವಿರಕ್ಕೂ ಹೆಚ್ಚಿನ ಹಿಂಬಾಲಕರು ಇರುವ ಈ ಖಾತೆ ವಿಜಯ್ ಮಲ್ಯ ಅವರ ಅಧಿಕೃತ ಖಾತೆಯಲ್ಲ. ಅವರ ಖಾತೆ ಬೇರೆಯಿದ್ದು, ಅಲ್ಲಿ 50 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ.
ವಿಶ್ವಾಸ್‌ಕುಮಾರ್ ಬದುಕುಳಿದದ್ದು ಹೇಗೆ?
ಘಟನೆ ನಡೆದ ಕೆಲವು ನಿಮಿಷಗಳ ಕಾರ್ಯಾಚರಣೆ ಬಳಿಕ ಓರ್ವ ಪ್ರಯಾಣಿಕ ಬದುಕುಳಿದಿರುವ ಸುದ್ದಿ ಬಂದಿತ್ತು. ಈ ವೇಳೆ ವಿಶ್ವಾಸ್‌ಕುಮಾರ್ ತಮ್ಮ ಸೀಟ್‌ನ ಪಕ್ಕದಲ್ಲೇ ಇದ್ದ ಎಮರ್ಜೆನ್ಸಿ ಎಕ್ಸಿಟ್ ಬಳಸಿ ಪ್ರಾಣ ಉಳಿಸಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಸ್ವತಃ ವಿಶ್ವಾಸ್‌ಕುಮಾರ್ ಪ್ರತಿಕ್ರಿಯಿಸಿ ತಾನು ಎಮರ್ಜೆನ್ಸಿ ಎಕ್ಸಿಟ್‌ನಿಂದ ಹಾರಲಿಲ್ಲ. ಬದಲಾಗಿ ತಾನೂ ಸಹ ಎಲ್ಲರಂತೆ ಅಪಘಾತಕ್ಕೊಳಗಾದೆ, ಕೆಲವೇ ಕ್ಷಣಗಳಲ್ಲಿ ಅವಘಡ ಸಂಭವಿಸಿತು, ಇದ್ದಕ್ಕಿಂದ್ದಂತೆ ಕತ್ತಲೆ ಆವರಿಸಿತು. ಕಣ್ಣು ಬಿಟ್ಟಾಗ ತನ್ನ ಸುತ್ತ ಹೆಣಗಳ ರಾಶಿ ಬಿದ್ದಿತ್ತು. ಆ ಸಮಯದಲ್ಲಿ ಭಯದಿಂದ ಎದ್ದು ಓಡಲು ಶುರು ಮಾಡಿದೆ. ಅಷ್ಟರಲ್ಲಿ ಯಾರೋ ತನ್ನನ್ನು ಹಿಡಿದೆಳೆದು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆತಂದರು ಎಂದು ಹೇಳಿಕೊಂಡರು.









