
ಉಡುಪಿ: ಜಿಲ್ಲೆಯಾದ್ಯಂತ ಶನಿವಾರವೂ ಬಿರುಸಿನ ಮಳೆ ಸುರಿದಿದ್ದು, ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ.
ಉಡುಪಿ ನಗರ ವ್ಯಾಪ್ತಿಯಲ್ಲಿ ಸುರಿದ ಮಳೆಗೆ ಅಂಬಲಪಾಡಿ ಸರ್ವಿಸ್ ರಸ್ತೆಯಲ್ಲಿ ಮಳೆ ನೀರು ಸಂಗ್ರಹವಾಗಿ ವಾಹನ ಸವಾರರು ಪರದಾಡಿದರು.
ಕೊಡವೂರು ವಾರ್ಡಿನ ತೋಂದುಬೆಟ್ಟಿನಲ್ಲಿ ಭಾರಿ ಗಾಳಿ, ಮಳೆಗೆ ಗಿರಿಜಾ ಮಡಿವಾಳ್ತಿ ಎಂಬುವವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.
ಸ್ಥಳಕ್ಕೆ ಶಾಸಕ ಯಶ್‌ಪಾಲ್ ಸುವರ್ಣ ಭೇಟಿ ನೀಡಿ ಪರಿಶೀಲಿಸಿದರು.
ಉಡುಪಿ ತಾಲ್ಲೂಕಿನ ಪೆರ್ಡೂರಿನ ಮುದ್ದು ನಾಯಕ್, ಕೊಡವೂರಿನ ಹರಿ ಶೆಟ್ಟಿಗಾರ್, ಮರ್ಣೆಯ ರಮೇಶ್ ಪ್ರಭು ಅವರ ಮನೆಗಳಿಗೆ ಮಳೆಯಿಂದಾಗಿ ಭಾಗಶಃ ಹಾನಿಯಾಗಿದೆ. ಹಿರೇಬೆಟ್ಟುವಿನ ರಾಮ ನಾಯ್ಕ್ ಅವರ ಮನೆ ಮೇಲೆ ಮರ ಬಿದ್ದು ಮನೆ ಭಾಗಶಃ ಹಾನಿಗೊಂಡಿದೆ.
ಭಾನುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಾರ್ಕಳದಲ್ಲಿ 5ಸೆಂ.ಮೀ., ಕುಂದಾಪುರದಲ್ಲಿ 6 ಸೆಂ.ಮೀ., ಉಡುಪಿಯಲ್ಲಿ 8 ಸೆಂ.ಮೀ., ಬೈಂದೂರಿನಲ್ಲಿ 8 ಸೆಂ.ಮೀ., ಬ್ರಹ್ಮಾವರದಲ್ಲಿ 9 ಸೆಂ.ಮೀ., ಕಾಪುವಿನಲ್ಲಿ 4 ಸೆಂ.ಮೀ, ಹೆಬ್ರಿ ವ್ಯಾಪ್ತಿಯಲ್ಲಿ 11 ಸೆಂ.ಮೀ. ಮಳೆಯಾಗಿದೆ.









