ರಾಜ್ಯದಲ್ಲಿ ಸದ್ಯಕ್ಕೆ ಶಾಲೆ ಬಂದ್ ಮಾಡಲ್ಲ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ – ಕಹಳೆ ನ್ಯೂಸ್

ಸುದ್ದಿಗಾರರೊಂದಿಗೆ ಮಾತನಾಡಿ, ‘ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಪೋಷಕರು ಗಾಬರಿ, ಆತಂಕಪಡುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ತಾಂತ್ರಿಕ ಸಲಹಾ ಸಮಿತಿ ಏನಾದರೂ ಸಲಹೆ, ಸೂಚನೆಗಳನ್ನು ನೀಡಿದರೆ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ರಾಜ್ಯದಲ್ಲಿ 48 ಸಾವಿರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿದ್ದು, ಯಾವ ಶಾಲೆಯಲ್ಲೂ ಮಕ್ಕಳಿಗೆ ಕೋವಿಡ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿರುವಂತೆ ಆರೋಗ್ಯವನ್ನೂ ಗಮನಿಸಲಾಗುತ್ತಿದೆ. ಪ್ರತಿ ಅರ್ಧ ಹಾಗೂ ಒಂದು ಗಂಟೆಗೆ ಒಮ್ಮೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಂದ ಶಿಕ್ಷಣ ಇಲಾಖೆ ವರದಿ ಪಡೆದುಕೊಳ್ಳುತ್ತಿದೆ. ಇದನ್ನು ತಾಂತ್ರಿಕ ಸಲಹಾ ಸಮಿತಿ ಜತೆಗೂ ಹಂಚಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಪ್ರಸ್ತುತ ಹಲವರು ಮಾಸ್ಕ್ ಬಳಸುವುದನ್ನೇ ಬಿಟ್ಟಿದ್ದಾರೆ. ಶಾಲೆಯಲ್ಲಿ ಹಾಗೂ ಶಾಲೆಯಿಂದ ಮನೆಗೆ ಹೋಗುವ ಸಮಯದಲ್ಲಿ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಬಳಸುವಂತೆ ನೋಡಿಕೊಳ್ಳಲು ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಕೋವಿಡ್ ಮತ್ತೆಯಾದ ಶಾಲೆಯನ್ನು ಮುಚ್ಚಿ ಸ್ಯಾನಿಟೈಸ್ ಮಾಡಲಾಗುತ್ತದೆ. ಕೋವಿಡ್ ನಿಯಮ ಪಾಲನೆ ಕಟ್ಟುನಿಟ್ಟು ಮಾಡಲಾಗಿದೆ ಎಂದರು.
ಧಾರವಾಡ ವೈದ್ಯಕೀಯ ಕಾಲೇಜು, ಬೆಂಗಳೂರಿನ ವಸತಿ ಶಾಲೆಯಲ್ಲಿ ಕೋವಿಡ್ ದೃಢಪಟ್ಟಿದೆ. ಭಾನುವಾರ ಮೈಸೂರಿನ ಪದವಿ ಪೂರ್ವ ಕಾಲೇಜಿನಲ್ಲಿ ಕೋವಿಡ್ ಲಕ್ಷಣಗಳು ಕಂಡುಬಂದಿವೆ. ಅದು ಬಿಟ್ಟರೆ ಪ್ರಾಥಮಿಕ ಶಾಲೆಗಳ ಹಂತದಲ್ಲಿ ಎಲ್ಲೂ ವರದಿಯಾಗಿಲ್ಲ. ಸಾಕಷ್ಟು ತಾಲ್ಲೂಕುಗಳಲ್ಲಿ ದೃಢ ಪ್ರಮಾಣ ಶೂನ್ಯಕ್ಕೆ ಇಳಿದಿದೆ. ಎಲ್ಲವನ್ನೂ ಪ್ರತಿ ದಿನವೂ ಗಮನಿಸಲಾಗುತ್ತಿದೆ ಎಂದು ತಿಳಿಸಿದರು.











