Thursday, May 14, 2026
ಸುದ್ದಿ

ಶ್ರೀಮಂಗಲದಲ್ಲಿ ಪುತ್ತೂರು ಮೂಲದ ಡಾ. ಸನತ್‌ಕೃಷ್ಣ ಮುಳಿಯ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ : ಹುಲಿ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಫಲ – ಕಹಳೆ ನ್ಯೂಸ್

ಶ್ರೀಮಂಗಲ : ಹುದಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಸುವೊಂದನ್ನು ಬಲಿ ಪಡೆದಿರುವ ಹುಲಿಯ ಪತ್ತೆಗೆ ಪುತ್ತೂರು ಮೂಲದ ಅರಿವಳಿಕೆ ತಜ್ಞ ಡಾ. ಸನತ್‌ಕೃಷ್ಣ ಮುಳಿಯ ಅವರ ಮಾರ್ಗದರ್ಶನದಲ್ಲಿ ಅರಣ್ಯಾಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದ್ದು, ಮೇ .19ರ ರಾತ್ರಿ ಹುಲಿಯನ್ನು ಬೆಳ್ಳೂರಿನ ಕಾಫಿ ತೋಟದಲ್ಲಿ ಹಿಡಿಯುವಲ್ಲಿ ಅರಣ್ಯ ಇಲಾಖೆ ತಂಡ ಯಶಸ್ವಿಯಾಗಿದೆ.

ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಬೆಳ್ಳೂರು ಗ್ರಾಮದ ಕಳ್ಳೇಂಗಡ ದಿನೇಶ್ ದೇವಯ್ಯ ಅವರು ಮೇಯಲು ಹಾಲು ಕರೆಯುವ ಜರ್ಸಿ ತಳಿಯ ಹಸು ಮತ್ತು ಆರು ತಿಂಗಳ ಕರುವನ್ನು ಮೇಯಲೆಂದು ತನ್ನ ಗದ್ದೆಯಲ್ಲಿ ಕಟ್ಟಿಹಾಕಿ ಬಂದಿದ್ದರು. ಸಂಜೆ ಹಸು, ಕರುವನ್ನು ಮರಳಿ ಕೊಟ್ಟಿಗೆಗೆ ಕರೆ ತರಲೆಂದು ಹೋಗಿದ್ದಾಗ ಹಸುವನ್ನು ಹುಲಿ ಕೊಂದು ಹಾಕಿರುವುದು ಕಂಡು ಬಂದಿತ್ತಲ್ಲದೆ, ಕರುವನ್ನು ಅಲ್ಲಿಂದ ಕರೆ ತರುತ್ತಿದ್ದ ವೇಳೆ ಕೇವಲ 5 ಅಡಿ ದೂರದಲ್ಲಿ ಹುಲಿ ಕಂಡು ಬಂದಿತ್ತು. ಭಯಭೀತರಾಗಿದ್ದ ದೇವಯ್ಯ ಅವರು ಅಲ್ಲಿಂದ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಮದ್ಯೆ ಕಟ್ಟೇರ ಈಶ್ವರರವರ ಮನವಿ ಮೇರೆಗೆ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಇತರ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಇಲಾಖೆಗೆ ತಕ್ಷಣ ಹುಲಿ ಹಿಡಿಯಲು ಒತ್ತಾಯಿಸಿದ್ದರು.

ವಿರಾಜಪೇಟೆ ತಾಲೂಕಿನ ಕುಮಟೂರು, ನಡಿಕೇರಿ, ತೂಚಮಕೇರಿ, ಟಿ.ಶೆಟ್ಟಿಗೇರಿ ಭಾಗಗಳಲ್ಲಿ ಏಪ್ರಿಲ್ ಕೊನೆಯಲ್ಲಿ ಹುಲಿ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇಟ್ಟಿದ್ದರು. ಆದರೆ, ಹುಲಿ ಸೆರೆ ಸಾಧ್ಯವಾಗಿರಲಿಲ್ಲ. ಕಳೆದ ಇಪ್ಪತ್ತು ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ಸಾಕಾನೆ ಬಳಸಿಕೊಂಡು ಕಾರ್ಯಾಚರಣೆಗೆ ಮುಂದಾಗಿತ್ತು. ಅದೂ ಫಲಪ್ರದವಾಗಿರಲಿಲ್ಲ.

ಡಾ. ಸತನ್‌ಕೃಷ್ಣ ಮುಳಿಯ ಮಾರ್ಗದರ್ಶನ :

ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ವನ್ಯಜೀವಿ ಅರಿವಳಿಕೆ ತಜ್ಞ ಡಾ.ಸನತ್‌ಕೃಷ್ಣ ಮುಳಿಯ ಅವರ ಮಾರ್ಗದರ್ಶನದಲ್ಲಿ ಹುಲಿ ಸೆರೆ ಕಾರ್ಯಾಚರಣೆ ನಡೆಯುತ್ತಿತ್ತು. ಮೇ .19ರಂದು ರಾತ್ರಿ ವೇಳೆ ಸ್ಥಳೀಯರು ನೀಡಿದ ಮಾಹಿತಿ ಹಾಗೂ ಅವರ ಸಹಕಾರದಿಂದ ಅರಣ್ಯ ಇಲಾಖೆ ಹುಲಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಸೆರೆ ಹಿಡಿದ ಹುಲಿಯನ್ನು ಚಿಕಿತ್ಸೆಗೆ ಮೈಸೂರು ಮೃಗಾಲಯಕ್ಕೆ ರವಾನೆ ಮಾಡಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಪ್ರಭಾರ ಡಿಎಫ್‌ಒ ಕೋಣೇರಿ ರೋಸಿನಿ, ಎಸಿಎಫ್ ಶ್ರೀಪತಿ, ಪೊನ್ನಂಪೇಟೆ ವಲಯಾರಣ್ಯಾಧಿಕಾರಿ ಅರಮಣವಾಡ ತೀರ್ಥ, ಕುಶಾಲನಗರ ಡಿ.ವೈ.ಆರ್.ಎಫ್ ಒ. ಹಾಗೂ ಶಾರ್ಪ್ ಶೂಟರ್ ಎಂದೇ ಖ್ಯಾತರಾಗಿರುವ ಕನ್ನಂಡ ರಂಜನ್ ದೇವಯ್ಯರವರ ನೇತೃತ್ವದ ತಂಡದ ಯಶಸ್ವಿ ಕಾರ್ಯಾಚರಣೆಯಿಂದ ಹುಲಿಯನ್ನು ಹಿಡಿದು ಮೈಸೂರು ಮೃಗಾಲಯದ ಕೂರ್ಗಳ್ಳಿಯಲ್ಲಿರುವ ರೆಸ್ಕ್ಯೂ ಸೆಂಟರ್ ಗೆ ಬಿಡಲಾಗಿದೆ.

ಮತ್ತಿಗೋಡು ಸಾಕಾನೆಗಳನ್ನು ಬಳಸಿಕೊಂಡು, ಇಲಾಖೆಯ 50ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದೇವೆ. ಹಗಲು ವೇಳೆ ಹುಲಿಯ ಜಾಡು ಪತ್ತೆಯಾಗುತ್ತಿರಲಿಲ್ಲ. ಎರಡು ದಿನಗಳ ಹಿಂದೆ ಕಾರ್ಯಾಚರಣೆಯ ತಂತ್ರ ಬದಲಿಸಿ, ಸಂಜೆಯಾದ ಮೇಲೆ ವೈಜ್ಞಾನಿಕ ಕಾರ್ಯಾಚರಣೆಗೆ ಮುಂದಾಗಿದ್ದೆವು. ಹುಲಿಯ ಇರುವಿಕೆಯನ್ನು ಪತ್ತೆಹಚ್ಚಿ ಅರಿವಳಿಕೆ ಮದ್ದು ನೀಡಿ ಸೆರೆ ಹಿಡಿಯಲು ನಿರ್ಧರಿಸಿದ್ದು ಈ ಕಾರ್ಯಾಚರಣೆಗೆ ಯಶಸ್ಸು ಸಿಕ್ಕಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.