Thursday, May 14, 2026
ಸುದ್ದಿ

2020 ರಲ್ಲಿ ಚಂದ್ರಯಾನ-3 ಅಷ್ಟೇ ಅಲ್ಲ, ಮಾನವ ಸಹಿತ ಗಗನಯಾನಕ್ಕೂ ಇಸ್ರೋ ಸಜ್ಜು – ಕಹಳೆ ನ್ಯೂಸ್

ಬೆಂಗಳೂರು, ಜ.1- ಪ್ರಸಕ್ತ ವರ್ಷ ಚಂದ್ರಯಾನ-3ಗೆ ಇಸ್ರೋ ಸಿದ್ಧವಾಗಿದೆ. ಚಂದ್ರಯಾನ-2ರಲ್ಲಿ ಸಾಫ್ಟ್‍ಲ್ಯಾಂಡಿಂಗ್ ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಬಾರಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ಚಂದ್ರನ ಮೇಲೆ ಸುರಕ್ಷಿತವಾಗಿ ಲ್ಯಾಂಡರ್ ಇಳಿಸಲು ಚಂದ್ರಯಾನ-3 ಹಮ್ಮಿಕೊಂಡಿದ್ದೇವೆ ಎಂದು ಇಸ್ರೋ ಅಧ್ಯಕ್ಷ ಕೆ.ಸಿವನ್ ಸುದ್ದಿಗೋಷ್ಠಿಯಲ್ಲಿಂದು ವಿವರ ನೀಡಿದರು.

 

ಪ್ರಸಕ್ತ ಸಾಲಿನಲ್ಲಿ ನಾವು ಚಂದ್ರಯಾನ-3, ಗಗನಯಾನ ಹಾಗೂ ಎಸ್‍ಎಸ್‍ಎಲ್‍ವಿ ಉಡಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಅವರು ವಿವರ ನೀಡಿದರು.
2020ರಲ್ಲಿ ಪ್ರಮುಖ ಈ ಮೂರು ಯೋಜನೆಗಳನ್ನು ಇಸ್ರೋ ಹಮ್ಮಿಕೊಂಡಿದ್ದರೂ ಚಂದ್ರಯಾನ-3ಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು. ಚಂದ್ರಯಾನ-2ರಲ್ಲಿನ ಲ್ಯಾಂಡರ್ ಹಾಗೂ ರೋವರ್‍ಗಳನ್ನೇ ಚಂದ್ರಯಾನ-3ರಲ್ಲೂ ಬಳಸಿಕೊಳ್ಳುತ್ತಿದ್ದೇವೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಚಂದ್ರಯಾನ-2ರಲ್ಲಿ ಲ್ಯಾಂಡಿಂಗ್ ವೇಳೆ ಸಮಸ್ಯೆಯಾಗಿತ್ತು. ನಾವು ನಾವಿಗೇಷನ್ ಕಂಟ್ರೋಲ್ ಸಿಸ್ಟಮ್ ಹ್ಯಾಂಡಲ್ ಮಾಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ಚಂದ್ರಯಾನ-3ನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತೇವೆ ಎಂದು ಸಿವನ್ ವಿಶ್ವಾಸ ವ್ಯಕ್ತಪಡಿಸಿದರು. ಚಂದ್ರಯಾನ-3ರ ಲ್ಯಾಂಡರ್ ಮತ್ತು ರೋವರ್‍ಗಾಗಿ 250 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಯೋಜನೆಯ ಲಾಂಚ್‍ಗೆ 365 ಕೋಟಿ ಸೇರಿದಂತೆ ಒಟ್ಟಾರೆ 650 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.

ವಿಕ್ರಂ ಲ್ಯಾಂಡರ್‍ಅನ್ನು ಪತ್ತೆಹಚ್ಚಿದ್ದು ಅಮೆರಿಕದ ನಾಸಾ ಸಂಸ್ಥೆಯೋ ಅಥವಾ ಭಾರತದ ಯುವಕ ವಿಕ್ರಂ ಅವರೇ ಎನ್ನುವ ಬಗ್ಗೆ ಸ್ಪಷ್ಟ ಉತ್ತರ ನೀಡದ ಶಿವನ್ ಅವರು ಲ್ಯಾಂಡರ್ ಪತ್ತೆಹಚ್ಚಿದವರಿಗೆ ಧನ್ಯವಾದ ತಿಳಿಸುತ್ತೇವೆ ಎಂದಷ್ಟೆ ಹೇಳಿದರು. ನಾವು ಮಾಡಿರುವ ಪ್ಲಾನ್ ಪ್ರಕಾರ, ಈ ವರ್ಷ 25 ಮಿಷನ್‍ಗಳನ್ನು ಟಾರ್ಗೆಟ್ ಇಟ್ಟುಕೊಂಡಿದ್ದೇವೆ. ವರ್ಷದ ಕೊನೆಯಲ್ಲಿ ಮಾನವ ಸಹಿತ ಮಿಷನ್ ನಡೆಸಲು ಚಿಂತನೆ ನಡೆಸಲಾಗಿದೆ ಎಂದರು. ನಾಲ್ಕು ಪುರುಷಯಾತ್ರಿಗಳನ್ನು ಗಗನಯಾತ್ರೆಗೆ ಆಯ್ಕೆ ಮಾಡಲಾಗಿದೆ. ತಮಿಳುನಾಡಿನ ತೂತುಕುಡಿಯಲ್ಲಿ ಗಗನಯಾನ ಕಾರ್ಯ ಆರಂಭವಾಗಿದೆ ಎಂದು ಅವರು ಹೇಳಿದರು.

ಚಂದ್ರಯಾನ-3 ಹಾಗೂ ಗಗನಯಾನದ ಜತೆಗೆ ಈ ವರ್ಷ ನಾವು ಎಸ್‍ಎಸ್‍ಎಲ್‍ವಿಗಳನ್ನು ಲಾಂಚ್ ಮಾಡಲು ತೀರ್ಮಾನಿಸಿದ್ದೇವೆ. ಇದರ ಜತೆಗೆ 2020ರಲ್ಲಿ ಹಲವಾರು ನೂತನ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಅವರು ವಿವರಿಸಿದರು. ಗಗನಯಾನ ಮತ್ತು ಚಂದ್ರಯಾನವನ್ನು ಈ ವರ್ಷವೇ ನಡೆಸಲು ತೀರ್ಮಾನಿಸಲಾಗಿದ್ದರೂ ಯಾನದ ಲಾಂಚ್ ದಿನಾಂಕ ನಿಗದಿಪಡಿಸಿಲ್ಲ ಎಂದು ಸಿವನ್ ಹೇಳಿದರು.

ಭವಿಷ್ಯದಲ್ಲಿ ಇಸ್ರೋ ಹಲವಾರು ಮಹತ್ವದ ಯೋಜನೆಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಿದ್ದು, ಯೋಜನೆಯ ಸಾಕಾರಕ್ಕಾಗಿ ತಮಿಳುನಾಡಿನ ತೂತುಕುಡಿಯಲ್ಲಿ ಅಗತ್ಯವಿರುವಷ್ಟು ಭೂಮಿ ಪಡೆದು 2300 ಎಕರೆ ಜಾಗದಲ್ಲಿ ಸ್ಪೇಸ್‍ಪೋರ್ಟ್ ನಿರ್ಮಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಇಸ್ರೋ ಅಧ್ಯಕ್ಷರು ವಿವರಿಸಿದರು.

ಶೀಘ್ರ ಇಸ್ರೋ ಟಿವಿ ಲಾಂಚ್: ಶೀಘ್ರದಲ್ಲೇ ಇಸ್ರೋ ಟಿವಿ ಆರಂಭಗೊಳ್ಳಲಿದೆ ಎಂದು ಇದೇ ಸಂದರ್ಭದಲ್ಲಿ ಸಿವನ್ ಸ್ಪಷ್ಟಪಡಿಸಿದರು. ಕಳೆದ ವರ್ಷವೇ ಇಸ್ರೋ ಟಿವಿ ಲಾಂಚ್ ಮಾಡುವ ಉದ್ದೇಶ ಹೊಂದಲಾಗಿತ್ತು. ಆದರೆ, ಎಲ್ಲ ಕಾರ್ಯ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಟಿವಿ ಲಾಂಚ್ ಮಾಡಲಾಗುವುದು ಎಂದು ಅವರು ಹೇಳಿದರು.

ಚಂದ್ರಯಾನ-2ರಲ್ಲಿ ಯಾವುದೋ ಒಂದು ಉಪಕರಣ ಕೆಲಸ ಮಾಡಲಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲ ಉಪಕರಣಗಳೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದವು. ವಾತಾವರಣದ ಬದಲಾವಣೆಯಿಂದಾಗಿ ಉಪಕರಣಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಲ್ಯಾಂಡಿಂಗ್ ವೇಳೆ ಸಮಸ್ಯೆಯಾಗಿತ್ತು. ಹೀಗಾಗಿ ಚಂದ್ರಯಾನ-3ರಲ್ಲಿ ಆರ್ಬಿಟರ್ ಇರುವುದಿಲ್ಲ ಎಂದು ಸಿವನ್ ವಿವರಣೆ ನೀಡಿದರು.