Friday, July 24, 2026
ಸುದ್ದಿ

ಕುಂದಾಪುರದಲ್ಲಿ ನೀಟ್ ಹಗರಣ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ : ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ : ಕೆ.ವಿಕಾಸ್ ಹೆಗ್ಡೆ – ಕಹಳೆ ನ್ಯೂಸ್

ಕುಂದಾಪುರ: 2014 ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ‌ ಬಂದ‌ ಬಳಿಕ‌ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಂಧಿಯಾದ ಸ್ಥಿತಿಯಲ್ಲಿದೆ. ಒಟ್ಟಾರೆ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಹೇಳಿದರು.

ಶಾಸ್ತ್ರೀ ಸರ್ಕಲ್‌ ಬಳಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನೀಟ್‌ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ವಿರುದ್ದ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಭವಿಷ್ಯದ ಕನಸುಗಳನ್ನು ಕಂಡ ಬಡ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ಕುರಿತು ನ್ಯಾಯವನ್ನು ಕೇಳಿದರೆ ಪೊಲೀಸರು ಹಾಗೂ ಬಾಡಿಗೆ ಗೂಂಡಗಳ ಮೂಲಕ ಹಲ್ಲೆ‌ ನಡೆಸಲಾಗಿದೆ. ನೀಟ್ ಪ್ರಶ್ನೆಪತ್ರಿಕೆ ಹಗರಣ ಹಾಗೂ 21 ಅಮಾಯಕ ವಿದ್ಯಾರ್ಥಿಗಳ ಆತ್ಮಹತ್ಯೆಗಳಿಗೆ ಹಾಗೂ ವಿದ್ಯಾರ್ಥಿಗಳ ಹೆತ್ತವರಿಗೆ ನ್ಯಾಯ ಒದಗಿಸುವವರು ಯಾರು ಎಂಬ ಪ್ರಶ್ನೆ ದೇಶದ ಜನರ ಮುಂದಿದೆ.‌ ಧರ್ಮದ ಅಫೀಮನ್ನು ತಿನ್ನಿಸಿ ಶಿಕ್ಷಣ ಸಂಸ್ಥೆಗಳಲ್ಲಿ ಧರ್ಮ ಸಂಘರ್ಷಕ್ಕೆ ಪ್ರಚೋದನೆ ನೀಡುತ್ತಿದ್ದ ಬಿಜೆಪಿ ಪಕ್ಷದ‌ ಮುಖಂಡರು ಇಂದು ದೀರ್ಘ ಮೌನಕ್ಕೆ ಶರಣಾಗಿದ್ದಾರೆ. ಕನಸುಗಳನ್ನು ಕಂಡ ವಿದ್ಯಾರ್ಥಿಗಳ‌ ಮನದ ಭಾವನೆಗಳು ಇವರಿಗೆ ಅರ್ಥವಾಗುತ್ತಿಲ್ಲ. ನೋವಿನ ಮನೆಯಲ್ಲಿ ಮಾತ್ರ ಸಾಂತ್ವನಗಳಿಗೆ ಬೆಲೆ‌ ಇದೆ ಎನ್ನುವುದು ದೇಶದ ಜನರಿಗೆ ಖಾತ್ರಿಯಾಗಿದೆ. ಪಕ್ಷ ಭೇದಗಳನ್ನು ಮರೆತು ವಿದ್ಯಾರ್ಥಿಗಳ‌ ಹೋರಾಟವನ್ನು ದೇಶವಾಸಿಗಳು ಬೆಂಬಲಿಸಬೇಕು ಹಾಗೂ ಬಡವರ ಮನೆಗೂ ಶಿಕ್ಷಣ ಬೆಳಕನ್ನು‌ ನೀಡುವ ಸಿಇಟಿ ವ್ಯವಸ್ಥೆ ಮತ್ತೆ ಜಾರಿಯಾಗಲು ಸಂಘಟಿತ‌ ಹೋರಾಟ ರೂಪುಗೊಳ್ಳಬೇಕು ಎಂದು ಅವರು ಹೇಳಿದರು.

ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನೇಶ್ ಹೆಗ್ಡೆ ಅವರು, ದೇಶದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ವಿರುದ್ದ ವಾಂಗ್ಚುಕ್ ಅವರು ಕಳೆದ 20 ದಿನಗಳಿಂದ‌ ಹೋರಾಟ ನಡೆಸುತ್ತಿದ್ದರೂ ಅವರ ಮನವಿಗೆ ಸ್ಪಂದಿಸದ ಕೇಂದ್ರ ಸರ್ಕಾರ, ಅವರ ಇಚ್ಛೆಗೆ ವಿರುದ್ದವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿದೆ.‌ ವಿದ್ಯಾರ್ಥಿಗಳ ನ್ಯಾಯಯುತ ಪ್ರತಿಭಟನೆಯನ್ನು ಬಲಪ್ರಯೋಗ ಮಾಡಿ ನಿಯಂತ್ರಿಸಬಹುದು ಎನ್ನುವ ಮೋದಿ‌ ಸರ್ಕಾರದ ಭ್ರಮೆ‌ ಸುಳ್ಳಾಗಿದೆ. ಅಮಾನುಷವಾಗಿ ಮಕ್ಕಳಿಗೆ ಹಿಂಸೆ ನೀಡುವ ಮೂಲಕ ತಮ್ಮ‌‌ ಅಂತರಾಳದ‌ ರಾಕ್ಷಸಿ ಪ್ರವೃತ್ತಿಯನ್ಮು ಬಹಿರಂಗಪಡಿಸಲಾಗಿದೆ. ಖರ್ಗೆ, ರಾಹುಲ್, ಪ್ರಿಯಾಂಕ ಸೇರಿದಂತೆ ಕಾಂಗ್ರೆಸ್ ಮುಖಂಡರ ಬಂಧನವೂ ಖಂಡನೀಯ ಎಂದರು.

ಕೆಪಿಸಿಸಿ ಸದಸ್ಯ ಮಲ್ಯಾಡಿ ಶಿವರಾಮ‌ ಶೆಟ್ಟಿ, ಕೋಟ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ತಿಮ್ಮ ಪೂಜಾರಿ‌ ಮಣೂರು, ಮಾತನಾಡಿದರು.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪ್ರತಿಕೃತಿ ಸುಡಲಾಯಿತು. ನೀಟ್ ಹಗರಣ, ಕೇಂದ್ರ ಸರ್ಕಾರದ ನಿಲುವು ಖಂಡಿಸಿ ಹಾಗೂ ಸಚಿವ ಪ್ರಧಾನ್ ರಾಜಿನಾಮೆಗೆ ಆಗ್ರಹಿಸಿ ಘೋಷಣೆ ಕೂಗಲಾಯಿತು.

ರಾಜ್ಯ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಘಟಕದ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಎನ್ಎಸ್‌ಯುಐ ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್, ವಿವೇಕ್ ಕುಂದಾಪುರ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಶಮಂತ್ ಎಸ್ ಕರ್ಕೇರ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ‌ ಮುನಾಫ್ ಕೋಡಿ, ಪ್ರಮುಖರಾದ ದೇವಕಿ ಪಿ.ಸಣ್ಣಯ್ಯ, ಚಂದ್ರಶೇಖರ ಖಾರ್ವಿ, ಕೇಶವ ಭಟ್, ಪ್ರಭಾಕರ ಶೇರುಗಾರ ಕೋಡಿ, ವಿಜಯಾಧರ ಪೂಜಾರಿ, ಚಂದ್ರ ಎ ಅಮಿನ್, ಅಬ್ಬು ಮೊಹಮ್ಮದ್, ಸುರೇಶ್ ನಾಯ್ಕ್ ಆನಗಳ್ಳಿ, ಜೋಯ್‌ಸ್ಟನ್ ಕಳಂಜಿ, ಗಣೇಶ್ ಶೇರುಗಾರ್, ರಫೀಕ್ ಗಂಗೊಳ್ಳಿ, ಸುನಿಲ್ ಪೂಜಾರಿ ಕೋಡಿ, ರಿಯಾಝ್ ಕೋಡಿ, ವಾಣಿ ಶೆಟ್ಟಿ ಮೊಳಹಳ್ಳಿ, ರಮೇಶ್ ಶೆಟ್ಟಿ ವಕ್ವಾಡಿ, ರೇವತಿ ಎಸ್ ಶೆಟ್ಟಿ, ಜ್ಯೋತಿ ವಿ ಪುತ್ರನ್, ಮೊಹಮ್ಮದ್ ಎಂ ಕೋಡಿ, ಆಶಾ ಕರ್ವೆಲ್ಲೊ, ಗೀತಾ, ಅಶೋಕ್ ಸುವರ್ಣ, ಶಶಿಧರ ಕೋಟಿ, ಅಬಿಬ್ ಹಂಗಳೂರು ಇದ್ದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಶೆಟ್ಟಿ‌ ಕೆದೂರು ಸ್ವಾಗತಿಸಿದರು. ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೊ ನಿರೂಪಿಸಿದರು. ಕೋಟ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಗೋಪಾಲ ಬಂಗೇರ ವಂದಿಸಿದರು.

ಕುಂದಾಪುರ ಪೊಲೀಸ್ ನಿರೀಕ್ಷಕ ಜಯರಾಮ್ ಗೌಡ ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.