
ಔರಂಗಾಬಾದ್, ಡಿ.31- ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಸಂಪುಟ ವಿಸ್ತರಣೆ ಆದ ಕೆಲ ತಾಸುಗಳಲ್ಲೇ ಅಸಮಾಧಾನ ಸ್ಫೋಟಗೊಂಡಿದೆ. ಬೀಡ್ ಜಿಲ್ಲಾಯ ಎನ್‍ಸಿಪಿ ಶಾಸಕ ಪ್ರಕಾಶ್ ಸೋಲಂಕಿ ನಿನ್ನೆ ರಾತ್ರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಮ್ಮಂತಹವರು ರಾಜಕೀಯ ಮಾಡಲು ಅನರ್ಹರು ಎಂದು ಅವರು ಹೇಳಿದ್ದಾರೆ.
ಮಜಲ್ಗಾಂವ್ ಕ್ಷೇತ್ರದಿಂದ ನಾಲ್ಕು ಬಾರಿ ಚುನಾಯಿತರಾಗಿರುವ ಸೋಲಂಕಿ ಅವರ ಹಠಾತ್ ನಿರ್ಧಾರದ ಹಿಂದೆ ಸಂಪುಟಕ್ಕೆ ಸೇರಿಸಿಕೊಳ್ಳದಿರುವುದು ಪ್ರಮುಖ ಕಾರಣವಾಗಿರಬಹುದು. ಆದರೆ, ಇದನ್ನು ಅವರು ನಿರಾಕರಿಸಿದ್ದಾರೆ.ನಾವು ರಾಜಕೀಯ ಮಾಡಲು ಯೋಗ್ಯರಲ್ಲ ಎಂಬುದನ್ನು ಸಂಪುಟ ವಿಸ್ತರಣೆ ಸಾಕ್ಷೀಕರಿಸಿದೆ ಎಂದು ಹೇಳಿದರು.
ಇಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯದಿಂದ ದೂರ ಉಳಿಯುವುದಾಗಿ ಸುದ್ದಿ ಸಂಸ್ಥೆಯೊಂದಕ್ಕೆ ಸೋಲಂಕಿ ತಿಳಿಸಿದ್ದಾರೆ. ಪಕ್ಷದ ಯಾವುದೇ ನಾಯಕರೊಂದಿಗೆ ತಮಗೆ ಅಸಮಾಧಾನವಿಲ್ಲ. ತಮ್ಮ ರಾಜೀನಾಮೆಗೂ ಸಂಪುಟ ವಿಸ್ತರಣೆಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.









