
ಶ್ರೀನಗರ : ಕಣಿವೆ ರಾಜ್ಯ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ವಿಧಿ ರದ್ದುಗೊಳಿಸಿದ ಬಳಿಕ ಅಂದರೆ 145 ದಿನಗಳ ನಂತರ ಲಡಾಕ್ ಕೇಂದ್ರಾಡಳಿತ ಪ್ರದೇಶದ ಕಾರ್ಗಿಲ್ ನಲ್ಲಿ ಮೊಬೈಲ್ ಇಂಟರ್ ನೆಟ್ ಸೇವೆಯನ್ನು ಪುನರ್ ಆರಂಭಿಸಲಾಗಿದೆ.
ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಬಳಿಕ ವಿವಿಧೆಡೆ ಹಿಂಸಾಚಾರ ತಡೆಗೆ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಆ ಬಳಿಕ ಶ್ರೀನಗರ, ಪುಲ್ವಾಮಾ ಸೇರಿದಂತೆ ಹಲವೆಡೆ ಪರಿಸ್ಥಿತಿ ತಹಬದಿಗೆ ಬಂದ ಬಳಿಕ ಇಂಟರ್ ನೆಟ್ ಸೇವೆ ಒದಗಿಸಲಾಗಿತ್ತು. ಆದರೆ, ಕಾರ್ಗಿಲ್ ನಲ್ಲಿ ಕಳೆದ ನಾಲ್ಕು ತಿಂಗಳಿಂದ ಹಿಂಸಾಚಾರದಂತಹ ಘಟನೆಗಳು ನಡೆಯದ ಕಾರಣ ಈಗ ಇಂಟರ್ ನೆಟ್ ಸೇವೆಯನ್ನು ಒದಗಿಸಲಾಗಿದೆ.
ಲಡಾಖ್, ಜಮ್ಮು ಮತ್ತು ಕಾಶ್ಮೀರ ಕೇಂದ್ರೀಯ ಭಾಗವಾಗಿದ್ದು, ಆಗಸ್ಟ್ 5 ರಂದು ಕೇಂದ್ರ ಸರ್ಕಾರ 370 ವಿಧಿ ರದ್ದು ಮಾಡಿದ ಬಳಿಕ ಕಾರ್ಗಿಲ್ ನಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಬಳಸದಂತೆ ನಿಷೇಧ ಹೇರಲಾಗಿತ್ತು.









