
ಪ್ರತಿಭೆ ಮತ್ತು ಕಠಿಣ ಪರಿಶ್ರಮ ಉತ್ತುಂಗ ಸ್ಥಾನಕ್ಕೆ ಕೊಂಡೊಯ್ಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದಕ್ಕೆ ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಸಾಧನೆಗೆಂದು ಎದ್ದು ನಿಂತರೆ ಸವಾಲುಗಳು ಯಾರನ್ನೂ ಸೋಲಿಸಲಾರವು. ಭಾರತದ ಗ್ರಾಮೀಣ ಆಟ ಕಬ್ಬಡ್ಡಿ, ಗ್ರಾಮೀಣ ಯುವ ಪೀಳಿಗೆಯ ಕನಸಿನ ಕೂಸು. ಸಾಧಿಸುವ ಮನಸ್ಸು ಬಹಳಷ್ಟಿದ್ದರೂ ಮುಂದುವರಿಯುವಾಗ ತೊಡಕುಗಳು ಬರುವುದು ಸಹಜ.
ಇಂತಹ ಬಹಳಷ್ಟು ತೊಡಕುಗಳನ್ನು ಮೆಟ್ಟಿನಿಂತು ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಚೇತನ್ ಗೌಡ, ಪ್ರಸ್ತುತ ಪ್ರಗತಿ ಸ್ಟಡಿ ಸೆಂಟರ್ ಪುತ್ತೂರು ಇಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದಾರೆ. ಇವರು ಮಿತ್ತೂರು ಸಮೀಪದ ಕುವೆತಿಲಾ ನಿವಾಸಿ ಶಾಂತಪ್ಪ ಗೌಡ ಹಾಗೂ ಲತಾ ದಂಪತಿಯ ಸುಪುತ್ರ.
ಎಳವೆಯಲ್ಲೇ ತನ್ನನ್ನು ತಾನು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಸ್ಥ ದೇಹಕ್ಕೆ ಸ್ವಸ್ಥ ಮನಸ್ಸು ಎಂಬಂತೆ ಬೆಳೆಯುತ್ತಿರುವ ಇವರು ಶಾಲಾ ಹಂತದಲ್ಲಿಯೇ ಅಥ್ಲ್ಲೆಟಿಕ್ಸ್ ನಲ್ಲಿ ಹಲವಾರು ಬಹುಮಾನಗಳನ್ನು ತನ್ನದಾಗಿಸಿಕೊಂಡ ಕ್ರೀಡಾಪ್ರತಿಭೆ.
ಪ್ರತಿಭೆಯನ್ನು ಪ್ರೋತ್ಸಾಹಿಸಿದಾಗ ಮಾತ್ರ ಅದು ಹೊರ ಜಗತ್ತಿಗೆ ತೆರೆದುಕೊಳ್ಳಲು ಸಾಧ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ಈತನ ಚಟುವಟಿಕೆಗಳನ್ನು ಗಮನಿಸಿದ ದೈಹಿಕ ಶಿಕ್ಷಣ ಶಿಕ್ಷಕಿ ಸುಚಿತಾ ಇವರು ಚಿನ್ನವನ್ನು ಒರೆಗೆ ಹಚ್ಚುವಂತೆ ಈತನಲ್ಲಿ ಇರುವ ಸಾಮರ್ಥ್ಯವು ಹೊರಹೊಮ್ಮುವಂತೆ ಮಾರ್ಗದರ್ಶನ ನೀಡಿ ಇದೀಗ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣಕರ್ತರಾಗಿದ್ದಾರೆ.
ಚೇತನ್‍ಗೆ ಬಾಲ್ಯದಲ್ಲಿಯೇ ಕಬಡ್ಡಿಯಲ್ಲಿ ಅತೀವ ಪ್ರೀತಿ. ಅದಮ್ಯ ಉತ್ಸಾಹ. ಎಳವೆಯಿಂದಲೇ ಕಬಡ್ಡಿ ನೋಡುತ್ತಾ ಬೆಳೆದ ಈತ ತನ್ನ ನಿರಂತರ ಅಭ್ಯಾಸ, ಕಠಿಣ ಪರಿಶ್ರಮ, ಗುರುಗಳ ಮನೆಯವರ ಪ್ರೋತ್ಸಾಹ ಈತನನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಿಂಚುವಂತೆ ಮಾಡುವಲ್ಲಿ ಸಹಕಾರಿಯಾಗಿದೆ.
ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ ಎಂಬಂತೆ ಚೇತನ್‍ಗೆ ಆತನ ತಂದೆಯೇ ಮೊದಲ ಗುರು. ಈ ಪ್ರತಿಭೆಗೆ ಪ್ರೋತ್ಸಾಹ ನೀಡಿ ಎಲ್ಲಾವೂ ನಿನ್ನಿಂದ ಸಾಧ್ಯ ನೀನು ಸಾಧಿಸಬಲ್ಲೆ ಎಂದು ಹುರಿದುಂಬಿಸಿ, ಆತನಲ್ಲಿದ್ದ ಪ್ರತಿಭೆಯನ್ನು ಬಡಿದೆಬ್ಬಿಸಿದ ಮಾರ್ಗದರ್ಶಕ. ಈ ನಿಟ್ಟಿನಲ್ಲಿ ತನ್ನ ಕನಸಿಗೆ ಸಾಹಕಾರ ನೀಡಿ, ಅವಿರತ ಪ್ರಯತ್ನದಿಂದ ಹರಿಯಾಣದಲ್ಲಿ ನಡೆದ ಆಲ್ ಇಂಡಿಯಾ ಕಬ್ಬಡ್ಡಿ ಚಾಂಪಿಯನ್‍ಶಿಪ್ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಗೋಲ್ಡ್ ಮೆಡಲ್ ಪಡೆಯುವಲ್ಲಿ ಸಫಲರಾಗಿದ್ದಾರೆ.
ಹೀಗೆಯೇ ತನ್ನನ್ನು ಬೆಳೆಸಿ, ಪ್ರೋತ್ಸಾಹಿಸಿ, ಮಾರ್ಗದರ್ಶನ ನೀಡಿದ ಗುರುಗಳನ್ನು ನೆನೆಪಿಸುವ ಚೇತನ್‍ಗೌಡ ಅದೆಷ್ಟೇ ನೋವಿರಲಿ, ಕ್ರೀಡಾಪಟುವೊಬ್ಬ ಮೈದಾನಕ್ಕೆ ಕಾಲಿಟ್ಟಾಗ ಆ ಎಲ್ಲಾ ನೋವನ್ನು ಮಾಯಮಾಡುವ ಶಕ್ತಿ ಕ್ರೀಡೆಗಿದೆ. ಅದೇ ರೀತಿಯಲ್ಲಿ ಮಾನಸಿಕ ನೆಮ್ಮದಿ ಜೊತೆಗೆ ದೈಹಿಕ ಸ್ಥೈರ್ಯ ನೀಡುತ್ತದೆ ಎನ್ನುತ್ತಾರೆ. ಸಾಧನೆಯ ಹಾದಿಯಲ್ಲಿ ತೊಡಕುಗಳು ಸಹಜ. ಅವೆಲ್ಲವನ್ನೂ ಹಿಮ್ಮೆಟ್ಟಿ ನಿಂತಾಗ ಯಶಸ್ಸು ಖಂಡಿತ ದೊರೆಯುತ್ತದೆ ಎಂದು ಚೇತನ್ ಗೌಡ ನುಡಿಯುತ್ತಾರೆ.
ಈಗಾಗಲೇ ಒಪನ್ ಮ್ಯಾಚ್ ಮತ್ತು ರಾಜ್ಯಮಟ್ಟದ ಮ್ಯಾಚ್‍ಗಳಲ್ಲಿ ಗುರುತಿಸಿಕೊಂಡು ಯುವಪೀಳಿಗೆಯಲ್ಲಿ ಸಾಧಿಸುವ ಛಲ ತುಂಬಲು ಇವರು ಮಾದರಿಯಾಗಿದ್ದಾರೆ. ಇತ್ತೀಚೆಗೆ ಕೇರಳದಲ್ಲಿ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ, ಕೀನ್ಯಾದಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ, ಕೋಲ್ಪೆ ಷಣ್ಮುಖ ಸುಬ್ರಹ್ಮಣ್ಯ ಯುವಕ ಮಂಡಲವನ್ನು ಪ್ರತಿನಿಧಿಸುವ ಚೇತನ್ ಗೌಡ ಒಬ್ಬ ಆಲ್ ರೌಂಡರ್ ಆಟಗಾರ.
ಪ್ರತಿಭೆಗಳು ಹಲವಾರು ಮಿಂಚಿ ಮರೆಯಾದರೂ ಕೆಲವರು ಈ ನಡುವೆ ಬೆಳೆದು ತಮ್ಮ ಕೀರ್ತಿ ಪತಾಕೆಯನ್ನು ನಭಕ್ಕೇರಿಸಿ ಭಾರತಾಂಬೆಯ ಹೆಮ್ಮೆಯ ಪುತ್ರರಾಗುತ್ತಾರೆ. ಇಂತಹ ಮಹದಾಸೆಯನ್ನು ಹೊಂದಿರುವ ಚೇತನ್ ಗೌಡ ತನ್ನ ಮುಂದಿನ ಕ್ರೀಡಾ ಭವಿಷ್ಯದಲ್ಲಿ ದ್ರುವತಾರೆಯಂತೆ ಹೊಳೆದು ತನ್ನ ಮತ್ತು ತನ್ನವರ ಹೆಸರನ್ನು ಜಗದೆಲ್ಲೆಡೆ ಪಸರಿಸಲಿ.








