
ಪುಂಜಾಲಕಟ್ಟೆ : ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ಗುರುವಾರ ಬಂಟ್ವಾಳ ತಾಲೂಕಿನ ಕಕ್ಕೆಪದವಿನಲ್ಲಿ ಸಂಭವಿಸಿದೆ.
ಕಕ್ಕೆಪದವು ಜ್ಯುವೆಲ್ಲರಿ ಮಾಲಕ ಯೋಗೀಶ ಆಚಾರ್ಯ(35) ಎಂಬಾತ ಬಂಧಿತ ಆರೋಪಿ. ಆತ ವಿವಾಹಿತನಾಗಿದ್ದು, ಒಂದು ಮಗುವಿನ ತಂದೆಯಾಗಿದ್ದಾನೆ.
ಬಾಲಕಿ ಸಂಜೆ ಸುಮಾರು 4.30 ಹೊತ್ತಿಗೆ ಅಂಗಡಿಗೆ ಬಂದಿದ್ದ ಸಂದರ್ಭ ಆರೋಪಿ ಲೈಂಗಿಕ ದೌರ್ಜನ್ಯ ನಡೆಸಿದ್ದ. ಬಳಿಕ ಬಾಲಕಿ ಮನೆಗೆ ಅಳುತ್ತಾ ತೆರಳಿದ್ದಳು. ಮನೆ ಮಂದಿ ವಿಚಾರಿಸಿದಾಗ ಆರೋಪಿಯ ಕೃತ್ಯ ಬೆಳಕಿಗೆ ಬಂದಿತ್ತು. ಗುರುವಾರ ಬಾಲಕಿಯ ತಾಯಿ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಆರೋಪಿಯನ್ನು ಬಂಧಿಸಲಾಗಿತ್ತು. ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುಂಜಾಲಕಟ್ಟೆ ಠಾಣೆಯಲ್ಲಿ ಫೋಕ್ಸೋ ಖಾಯ್ದೆಯನ್ವಯ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.









