
ನವದೆಹಲಿ : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್ಪಿಜಿ ಬೆಲೆ ಇಳಿಕೆ ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಗೃಹ ಬಳಕೆಯ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್‍ಗೆ 62.5 ರು ಇಳಿಕೆಯಾಗಿದೆ. 637 ರೂ.ನಿಂದ 574.5 ರೂ. ಗೆ ಇಳಿಯಲಿದೆ.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡದೆ ನಷ್ಟ ಅನುಭವಿಸಿದ್ದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಈಗ ಮೂರನೇ ಬಾರಿಗೆ ಅಡುಗೆ ಅನಿಲ ದರವನ್ನು ಪರಿಷ್ಕರಿಸಿವೆ. ಜುಲೈ 1 ರಂದು ಎಲ್‍ಪಿಜಿ ಸಿಲಿಂಡರ್ ಬೆಲೆಯನ್ನು 100.5 ರೂ. ಕಡಿಮೆ ಮಾಡಲಾಗಿತ್ತು. ಸಬ್ಸಿಡಿಯುಳ್ಳ ಅಡುಗೆ ಅನಿಲ ಸಿಲಿಂಡರ್ ಬೆಲೆ 494.35 ರು ಆಗಿದೆ. ಒಂದು ತಿಂಗಳ ಅವಧಿಯಲ್ಲಿ ಎಲ್‍ಪಿಜಿ ಸಿಲಿಂಡರ್ ಬೆಲೆ 163 ರೂ. ಇಳಿಕೆ ಮಾಡಲಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೇಳಿದೆ.
ಇದಕ್ಕೂ ಮುನ್ನ ಜೂನ್ 02ರಂದು ಸಬ್ಸಿಡಿ ರಹಿತ ಗ್ಯಾಸ್ ಬೆಲೆ 25 ರೂ. ಏರಿಕೆಯಾಗಿತ್ತು. ಸಬ್ಸಿಡಿ ಇರುವ ಗ್ಯಾಸ್ ಸಿಲಿಂಡರ್ ಬೆಲೆ 1.23 ರೂ. ಏರಿಕೆಯಾಗಿತ್ತು. ಸತತ ನಾಲ್ಕನೇ ಬಾರಿಗೆ ಎಲ್ ಪಿಜಿ ಬೆಲೆ ಏರಿಕೆಯಾಗಿತ್ತು. ಜುಲೈ ತಿಂಗಳಿನಲ್ಲಿ ಬೆಲೆ ಇಳಿಕೆ ಮಾಡಲಾಗಿತ್ತು. ಈಗ ಆಗಸ್ಟ್ ಆರಂಭದಲ್ಲೂ ಇಳಿಕೆ ಕಂಡು ಬಂದಿದೆ. ಎಲ್ಲಾ ಎಲ್‍ಪಿಜಿ ಗ್ರಾಹಕರೂ ಮಾರುಕಟ್ಟೆ ಬೆಲೆಯಲ್ಲಿ ಅನಿಲ ಖರೀದಿ ಮಾಡಬೇಕಿದೆ. ವರ್ಷಕ್ಕೆ 14.2 ಕೆಜಿ ತೂಕದ 12 ಸಿಲಿಂಡರ್‍ಗಳಿಗೆ ಸರ್ಕಾರ ಸಬ್ಸಿಡಿ ಒದಗಿಸುತ್ತಿದ್ದು, ಅದು ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ.
ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಪ್ರತಿ ತಿಂಗಳ ಮೊದಲ ದಿನದಂದು ಇಂಧನ ದರ, ಸಬ್ಸಿಡಿ ರಹಿತ ಎಲ್ ಪಿಜಿ, ಜೆಟ್ ಇಂಧನ, ಸೀಮೆಎಣ್ಣೆ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ. ಬೆಲೆ ಏರಿಕೆ ಹಾಗೂ ಇಳಿಕೆ ಎಲ್ಲವೂ ಜಾಗತಿಕ ಮಾರುಕಟ್ಟೆ ದರದ ಮೇಲೆ ಅವಲಂಬಿತವಾಗಿರುತ್ತದೆ.









