ಗಡಿ ಕಾಯುವ ಸೈನಿಕರು ದೇವರಿಗೆ ಸಮ : ಅಕ್ಷಯ ಗೋಖಲೆ; ಸರಸ್ವತೀ ವಿದ್ಯಾಲಯದಲ್ಲಿ ಕಾರ್ಗಿಲ್ ದಿವಸ ಆಚರಣೆ – ಕಹಳೆ ನ್ಯೂಸ್

ಭಾರತಿಯರ ನೆಮ್ಮದಿಯ ಬದುಕಿಗಾಗಿ ಸ್ವಂತದ ಬದುಕನ್ನು ಲೆಕ್ಕಿಸದೆ ಹಗಲು ರಾತ್ರಿಯೆನ್ನದೆ ಹೋರಾಡುತ್ತಿರುವ ನಮ್ಮ ಸೈನಿಕರು ನಿಜವಾದ ಅರ್ಥದಲ್ಲಿ ನಮಗೆಲ್ಲ ಆದರ್ಶ ನಾಯಕರು. ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದ ಸೈನಿಕರ ಬಲಿದಾನ ದೇಶದ ಜನತೆಗೆ ರಾಷ್ಟ್ರ ಸೇವೆಗೆ ಸ್ಪೂರ್ತಿಯಾಗಲಿ ಎಂದು ನಿಟ್ಟೆ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕಿ ಅಕ್ಷಯ ಗೋಖಲೆ ತಿಳಿಸಿದರು.

ಅವರು ಕಡಬದ ಸರಸ್ವತೀ ಪದವಿಪೂರ್ವ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಆಯೋಜಿಸಿದ ‘ಕಾರ್ಗಿಲ್ ಸ್ಮರಣೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಸ್ವಾತಂತ್ರದ ಹೆಸರಿನಲ್ಲಿ ಭಾರತೀಯರು ತಾಯಿಯಂತೆ ಪೂಜಿಸುವ ನೆಲವನ್ನು ತುಂಡರಿಸಿದ್ದು ಮಾತ್ರವಲ್ಲದೆ ಮತ್ತಷ್ಟು ಭೂಮಿಗಾಗಿ ನಮ್ಮ ರಕ್ತ ಚೆಂಡಾಡುತ್ತಿರುವುದು ಹೇಯ ಕೃತ್ಯ. ನಮ್ಮ ಸೈನಿಕರ ಸಾವು ನೋವನ್ನು ಸಹಿಸಲಾಗದು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಗೀತಾ ಎಲೆಕ್ಟ್ರಾನಿಕ್ಸ್ ಕಡಬದ ಮಾಲಕ ಜೇಸಿ ದಿನೇಶ್ ಅವರು ಹುತಾತ್ಮ ಯೋಧರಿಗೆ ಹಣತೆಯನ್ನು ಬೆಳಗಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸರಸ್ವತೀ ಸಮೂಹ ಸಂಸ್ಥೆಗಳ ನಿರ್ದೇಶಕ ಉಮೇಶ್ ಶೆಟ್ಟಿ ಸಾಯಿರಾಂ, ದೇಶದ ರಕ್ಷಣೆಗೆ ಸೈನಿಕರು ಶ್ರಮ ವಹಿಸಿದರೆ ಅದರ ಪ್ರೇರಣೆಯಿಂದ ವಿದ್ಯಾರ್ಥಿದೆಸೆಯಲ್ಲಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ, ಜಲಮರುಪೂರಣ, ದುರ್ಬಲ ವರ್ಗದವರಿಗೆ ಸ್ಪಂದಿಸುವ ಮೂಲಕ ದೇಶಸೇವೆ ಮಾಡಬಹುದು ಎಂದು ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಸರಸ್ವತೀ ವಿದ್ಯಾಲಯದ ಕೋಶಾಧಿಕಾರಿ ಲಿಂಗಪ್ಪ ಜೆ, ನಿರ್ದೇಶಕಿ ಪುಲಸ್ತ್ಯಾ ರೈ, ಪದವಿಪೂರ್ವ ವಿಭಾಗದ ಪ್ರಾಂಶುಪಾಲ ಮಹೇಶ್ ನಿಟಿಲಾಪುರ, ಪ್ರೌಢ ವಿಭಾಗದ ಮುಖ್ಯಸ್ಥೆ ಶೈಲಶ್ರೀ ರೈ ಉಪಸ್ಥಿತರಿದ್ದರು.
ಕಾಲೇಜು ವಿಭಾಗದ ಸಾಂಸ್ಕøತಿಕ ಸಂಘದ ಅಧ್ಯಕ್ಷೆ ದಿವ್ಯ ಶ್ರೀ ಸ್ವಾಗತಿಸಿ, ಕಾವ್ಯಶ್ರೀ ವಂದಿಸಿ, ಪ್ರೌಢಶಾಲಾ ಮಂತ್ರಿಮಂಡಲದ ಉಪನಾಯಕ ನಿಹಾರ್ ಕಾರ್ಯಕ್ರಮ ನಿರೂಪಿಸಿದರು.









