
ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಬಡತನದ ರೇಖೆಗಿಂತ ಕೆಳಗಿರುವ ನಿವೇಶನ ರಹಿತರಿಗೆ ವಾಜಪೇಯಿ ನಗರ ನಿವೇಶನ ಯೋಜನೆಯ ಅನುಸಾರ ನಿವೇಶನ ಹಂಚಿಕೆಗೆ ಅನುಕೂಲವಾಗುವಂತೆ ಖಾಸಗಿ ಜಮೀನು ಖರೀದಿಗೆ ಪ್ರಸ್ತಾಪವಾಗಿದೆ. ಆ ಪ್ರಕಾರ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ವಸತಿ ಯೋಗ್ಯವಾದ ಖಾಸಗಿ ಜಮೀನನ್ನು ಸರಕಾರದ ಮಾರ್ಗ ಸೂಚಿಯಂತೆ ಪರಿಷ್ಕೃತ ದರ ಪ್ರತಿ ಎಕರೆಗೆ ರೂ. 22.5 ಲಕ್ಷ ಗರಿಷ್ಠ ಮಿತಿಯಲ್ಲಿ ಖರೀದಿಸುವುದೆಂದು ನಿರ್ಧರಿಸಲಾಗಿದೆ. ಮಾರಟಗಾರರಾದ ಆಸಕ್ತ ಪುತ್ತೂರು ನಗರಸಭಾ ವ್ಯಾಪ್ತಿಯ ಭೂ ಮಾಲಕರು ತಮ್ಮ ಭೂ ಹಕ್ಕಿನ ಪಹಣಿ ಮತ್ತು ಸ್ಥಳ ನಕ್ಷೆ ಪ್ರತಿಯೊಂದಿಗೆ 30 ದಿನಗಳ ಒಳಗೆ ಪುತ್ತೂರು ನಗರಸಭಾ ಪೌರಾಯುಕ್ತರನ್ನು ಸಂಪರ್ಕಿಸಲು ಕೋರಿದೆ.
ಷರತ್ತುಗಳು
ಜಮೀನಿನ ಪಹಣಿ ಮತ್ತು ನಕ್ಷೆ ಒದಗಿಸುವುದು
ಭೂ ಮಾಲಿಕ ಕುಟುಂಬ ಸದಸ್ಯರ ವಂಶವೃಕ್ಷ ಧೃಢೀಕರಣ ಹಾಗೂ ಎರಡು ಸಾಕ್ಷಿದಾರರ ಸಮ್ಮುಖದಲ್ಲಿ ರೂ.200 ಛಾಪಾ ಕಾಗದದಲ್ಲಿ ಕುಟುಂಬದ ಎಲ್ಲಾ ಸದಸ್ಯರ ವಾರಸುದಾರರ ಒಪ್ಪಿಗೆ ಪತ್ರ ಮತ್ತು ಋಣಭಾರರಾಹಿತ್ಯ ಪತ್ರವನ್ನು ಸಲ್ಲಿಸಬೇಕು.
ಖರೀದಿಗೆ ಅಪೇಕ್ಷಿತ ಜಮೀನು ವ್ಯಾಜ್ಯ ಭೂ ತಕರಾರು ಹಾಗೂ ಇನ್ನಿತರ ಪ್ರಕರಣಗಳಿಗೆ ಸಂಬಂಧಪಟ್ಟಂತೆ ನ್ಯಾಯಾಲಯ ವ್ಯವಹರಣೆಗೆ ಒಳಪಟ್ಟಿರಬಾರದು.
ಜಮೀನು, ವಸತಿ ಯೋಗ್ಯವಿರುವ ಬಗ್ಗೆ ಕಂದಾಯ ಇಲಾಖೆಯಿಂದ ಧೃಢೀಕರಿಸಿದ ನಂತರವೇ ಖರೀದಿ ಕ್ರಮ ಕೈಗೊಳ್ಳಲಾಗುವುದು ಮತ್ತು ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.








