Recent Posts

Saturday, May 9, 2026
ಸುದ್ದಿ

ಕೋಟಿ-ಚೆನ್ನಯರ ಮೂಲಸ್ಥಾನದಲ್ಲಿ ಅಚ್ಚರಿ ಮೂಡಿಸಿದ ಅವಳಿ ಹಲಸುಗಳು – ಕಹಳೆ ನ್ಯೂಸ್

ನಗರ: ಬಡಗನ್ನೂರು ಗ್ರಾಮದಲ್ಲಿರುವ ಅವಳಿ ವೀರರಾದ ಕೋಟಿ-ಚೆನ್ನಯರ ಮೂಲಸ್ಥಾನ ಗೆಜ್ಜೆಗಿರಿ ನಂದನ ಬಿತ್ತಿಲ್‍ನಲ್ಲಿ ಹಲಸಿನ ಮರವೊಂದರಲ್ಲಿ ಅವಳಿ ಹಲಸುಗಳು ಸಾಲು ಸಾಲಾಗಿ ಕಾಣಿಸಿಕೊಂಡಿರುವುದು ಕ್ಷೇತ್ರದ ಇತಿಹಾಸಕ್ಕೂ ಪೂರಕವಾಗಿರುವುದು ಕೌತುಕವಾಗಿದೆ.

ಸುಮಾರು ಐನೂರು ವರ್ಷಗಳ ಹಿಂದೆ ಕೋಟಿ-ಚೆನ್ನಯರು ವಾಸವಾಗಿದ್ದ, ಅವರ ತಾಯಿ ದೇಯಿ ಬೈದ್ಯೆತಿ ಮತ್ತು ಮಾವ ಸಾಯನ ಬೈದ್ಯರು ವಾಸವಾಗಿದ್ದ ಈ ಮನೆಯಲ್ಲಿ ಪ್ರಸ್ತುತ ಮೂಲಸ್ಥಾನ ಕ್ಷೇತ್ರ ನಿರ್ಮಾಣವಾಗುತ್ತಿದೆ. ದೇಯಿ ಬೈದ್ಯೆತಿ ಧರ್ಮಚಾವಡಿ ನಿರ್ಮಾಣ ಬಹುತೇಕ ಪೂರ್ಣಗೊಂಡು, ಮೂಲಸ್ಥಾನ ಗರಡಿ ನಿರ್ಮಾಣ ನಡೆಯುತ್ತಿದೆ. ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವಂತೆ ಇಲ್ಲಿನ ಹಲಸಿನ ಮರದಲ್ಲಿ ಅವಳಿ ಹಲಸುಗಳು ಮೂಡಿರುವುದು ಅಚ್ಚರಿ ಮೂಡಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಒಂದೇ ತೊಟ್ಟಿನಲ್ಲಿ ಎರಡು ಹಣ್ಣುಗಳು ಒಂದಕ್ಕೊಂದು ಅಂಟಿಕೊಂಡೇ ಬೆಳೆದಿವೆ. ಈಗಾಗಲೇ ಎರಡು, ಮೂರು ಅವಳಿ ಹಣ್ಣುಗಳನ್ನು ಕೊಯ್ದು ಬಳಸಲಾಗಿದೆ. ಇನ್ನೂ ಮೂರ್ನಾಲ್ಕು ಜೋಡಿಗಳು ಮರದಲ್ಲಿವೆ. ಮರದಲ್ಲಿ ಈ ಬಾರಿ ಇದುವರೆಗೆ ಟಿಸಿಲೊಡೆದು ಬೆಳೆದಿರುವ ಸುಮಾರು 30ರಷ್ಟು ಹಲಸುಗಳ ಪೈಕಿ ಅರ್ಧದಷ್ಟು ಅವಳಿಗಳಾಗಿರುವುದು ವಿಶೇಷ. ಏಕಕಾಲದಲ್ಲಿ ಏಳೆಂಟು ಅವಳಿಗಳು ಒಡಮೂಡಿದ್ದು ವಿಶೇಷವಾಗಿದೆ.

ಒಂದೇ ಮರದಲ್ಲಿ ಏಳೆಂಟು ಅವಳಿ ಹಲಸುಗಳು ಕಾಣಿಸಿಕೊಂಡಿದೆ. ಪ್ರಾಕೃತಿಕವಾಗಿ ಇದು ಸ್ವಾರಸ್ಯಕರ ಘಟನೆ. ಅದರಾಚೆಗೆ ಕಾರಣವನ್ನು ವಿಮರ್ಶಿಸಲು ಸಾಧ್ಯವಿಲ್ಲ ಎಂದು ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿ ಹೇಳುತ್ತಾರೆ.