
ಸುಳ್ಯ : ಸುಳ್ಯದ ಪ್ರಭಾರ ಉಪನೊಂದಣಾಧಿಕಾರಿಯೊಬ್ಬರು ಜಾಗದನೊಂದಣಿ ಕಛೇರಿಗೆ ಬರುವವರಿಂದ ಲಂಚ ಪಡೆಯುತ್ತಿರುವ ಕುರಿತ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಲಂಚ ಪಡೆಯುತ್ತಿರುವ ಅಧಿಕಾರಿಯ ಹೆಸರು ಕೇಶವಮೂರ್ತಿ ಎಂದು ತಿಳಿದು ಬಂದಿದ್ದು, ಕಳೆದ ಒಂದು ವರ್ಷದಿಂದ ಇವರು ಸುಳ್ಯ ಪ್ರಭಾರ ಉಪನೊಂದಣಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರಿಂದ ಲಂಚ ಪಡೆಯುವ ಸಂದರ್ಭದಲ್ಲಿ ಇದು ತನಗೆ ಮಾತ್ರವಲ್ಲ, ಎಲ್ಲರಿಗೂ ಇದರ ಪಾಲಿದೆ ಎಂದು ರಾಜಾರೋಷ ವಾಗಿ ಹೇಳುತ್ತಿರುವುದೂ ವಿಡಿಯೋದಲ್ಲಿ ದಾಖಲಾಗಿದೆ. ಈತನ ಕರ್ಮಕಾಂಡ ಇದೀಗ ಬಟಾಬಯಲಾಗಿದೆ.
ಈ ಕಛೇರಿಗಳಲ್ಲಿ ಭ್ರಷ್ಟಾಚಾರವನ್ನು ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ , ನಿಯಂತ್ರಣವಾಗಿಲ್ಲ. ಕಛೇರಿಯ ಎಲ್ಲಾ ಕಡತ ವ್ಯವಹಾರಗಳನ್ನು ಆನ್ ಲೈನ್ ಮೂಲಕ ಮಾಡಲಾಗಿದೆಯಾದರೂ , ಅರ್ಜಿಯ ಕೊನೆಯಲ್ಲಿ ಅಧಿಕಾರಿಯ ಸಹಿಗಾಗಿ ಅಧಿಕಾರಿಯ ಮುಂದೆ ಬರಲೇ ಬೇಕಾದ ಅನಿವಾರ್ಯತೆಯನ್ನೂ ಸೃಷ್ಟಿಸಲಾಗಿದೆ ಎನ್ನಲಾಗಿದೆ.
ಅರ್ಜಿಗಳು ಯಾವೆಲ್ಲಾ ಟೇಬಲ್ ಮುಖಾಂತರ ವಿಲೇವಾರಿಯಾಗಿದೆಯೋ, ಆ ಎಲ್ಲಾ ಟೇಬಲ್ ಗಳ ವಾರೀಸುದಾರರ ಫೀಸನ್ನು ಒಟ್ಟಿಗೆ ಸೇರಿಸಿ ಲಂಚ ಪಡೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಈತ ಇಸಿ ತೆಗೆಯಲು, ಜಾಗದ ನೊಂದಣಿ ಕಛೇರಿಗೆ ಬರುವವರಿಂದ ಹತ್ತು ಸಾವಿರ, ಇಪ್ಪತ್ತು ಸಾವಿರ ಹೀಗೆ ಲಂಚಪಡೆದುಕೊಳ್ಳುವಾಗ ಇದೀಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.








