
ಹುಬ್ಬಳ್ಳಿ: ಶಿವಳ್ಳಿ ಅವರನ್ನ ಖರೀದಿ ಮಾಡಲು ಬಿಜೆಪಿಯವರು ಮುಂದಾಗಿದ್ದರು ಎಂದು ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ. ವರೂರ ಗ್ರಾಮದಲ್ಲಿ ಕಾಂಗ್ರೆಸ್ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಶಿವಳ್ಳಿಯವರು ಒಮ್ಮೆಯೂ ವೈಯಕ್ತಿಕ ಕೆಲಸಗಳನ್ನ ನಮ್ಮಲ್ಲಿ ಕೇಳಿಲ್ಲ. ಅವರು ಕ್ಷೇತ್ರದ ಅನೇಕ ಕಾಮಗಾರಿಗಳಿಗೆ ನಮ್ಮಲ್ಲಿ ವಿನಂತಿ ಮಾಡಿದ್ದರು ಎಂದರು.
ಕುಸುಮಾ ಶಿವಳ್ಳಿ ನನ್ನ ಸಹೋದರಿ, ಬಿಜೆಪಿಗೆ ಬೇಕಾಗಿದ್ದು ಈ ಚುನಾವಣೆ ಫಲಿತಾಂಶ, ಮೈತ್ರಿ ಸರ್ಕಾರವನ್ನ ಅಭದ್ರಗೊಳಿಸಲು ಮುಂದಾಗುತ್ತಿದ್ದಾರೆ. ಮೈತ್ರಿ ಸರ್ಕಾರ ರಚನೆ ಆದಾಗಿನಿಂದಲೂ ಅವರು ಈ ಸರ್ಕಾರವನ್ನ ಕೆಡವಲು ಮುಂದಾಗಿದ್ದರು. ಶಿವಳ್ಳಿಯವರದ್ದು ಬಡ ಕುಟುಂಬ, ಅವರು ಶಾಸಕರಾಗಿ ಹಣ ಮಾಡಿಲ್ಲ. ಅವರು ಸಂಪಾದನೆ ಮಾಡಿದ್ದು ಈ ಕ್ಷೇತ್ರದ ಜನರ ಪ್ರೀತಿ. ಈ ಕುಂದಗೋಳ ಕ್ಷೇತ್ರವನ್ನ ಶಿವಳ್ಳಿಯವರಿಗೆ ಗೌರವ ಕೊಡಲು ನಾವು ದತ್ತು ತೆಗೆದುಕೊಳ್ಳುತ್ತೇವೆ. ಕ್ಷೇತ್ರದ ಅಭಿವೃದ್ಧಿ ಮಾಡಲು ನಮ್ಮ ಸರ್ಕಾರ ಶ್ರಮ ವಹಿಸಿಸುತ್ತದೆ. ರೈತರ ಸಾಲಮನ್ನಾ ಮಾಡುವ ವಿಚಾರದ ಬಗ್ಗೆ ಬಿಜೆಪಿ ನಾಯಕರು ಲಘುವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದರು.









