ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಚಿನ್ನದ ರಥ ನೀಡುವ ಪ್ರಸ್ತಾವನೆ: ಕೊನೆಗೂ ಸಚಿವ ಸಂಪುಟದಿಂದ ಗ್ರೀನ್ ಸಿಗ್ನಲ್ – ಕಹಳೆ ನ್ಯೂಸ್

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಚಿನ್ನದ ರಥ ನೀಡುವ ಪ್ರಸ್ತಾವನೆಗೆ ಕೊನೆಗೂ ಸಚಿವ ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರ ನೇತೃತ್ವದಲ್ಲಿ ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿದೆ. ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ, ಇಂದಿನ ಮಾರುಕಟ್ಟೆ ದರದಲ್ಲಿ ಚಿನ್ನದ ಬೆಲೆ ಹಾಗೂ ನಿರ್ಮಾಣಕ್ಕೆ ತಗುಲುವ ವೆಚ್ಚ ಸೇರಿ ಎಲ್ಲಾ ಖರ್ಚುಗಳನ್ನು ಲೆಕ್ಕ ಹಾಕಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಮೂಲಕ ಬರೋಬ್ಬರಿ 80 ಕೋಟಿ ವೆಚ್ಚದಲ್ಲಿ ರಥ ಸಿದ್ದಪಡಿಸಲು ನಿರ್ಧರಿಸಲಾಗಿದೆ.

ಧರಮ್‍ಸಿಂಗ್ 2005 ರಲ್ಲಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದಾಗ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ 15 ಕೋಟಿ ಚಿನ್ನದ ರಥ ಮಾಡಿಸುವ ಹರಕೆ ಹೊತ್ತಿದ್ದರು. ಇದಕ್ಕಾಗಿ ದೇವಾಲಯದಲ್ಲಿರುವ ಲಭ್ಯವಿರುವ ಚಿನ್ನ ಬಳಸಿಕೊಂಡು ಜೊತೆಗೆ ಉಳಿದ ಚಿನ್ನಕ್ಕಾಗಿ ಬ್ಯಾಂಕ್ ಸಾಲದ ಮೂಲಕ ಖರೀದಿಸಲು ಸರ್ಕಾರ ಅನುಮತಿ ನೀಡಿತ್ತು. ಆದರೆ ಆಗ ಚಿನ್ನದ ರಥ ನೀಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಹರಕೆ ತೀರಿಸುವಂತೆ ಕುಮಾರಸ್ವಾಮಿಗೆ ಆಪ್ತ ಪುರೋಹಿತರು ಸೂಚಿಸಿದ್ದರಂತೆ. ಈ ಸಂಬಂಧ ಹರಕೆ ತೀರಿಸಲು ಸಿಎಂ ಹೆಚ್‍ಡಿಕೆ ಮುಂದಾಗಿದ್ದಾರೆ.








