ಅಲ್ಬೇನಿಯಾದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ : ಸುಪ್ರೀಂ ಕೋರ್ಟ್, ಸರ್ಕಾರಿ ಕಚೇರಿಗೆ ಬೆಂಕಿ – ಕಹಳೆ ನ್ಯೂಸ್

ತಿರಾನಾ: ನಿರುದ್ಯೋಗ, ಶಿಕ್ಷಣ ವೆಚ್ಚ ಏರಿಕೆ ಹಾಗೂ ಭ್ರಷ್ಟಾಚಾರದ ವಿರುದ್ಧ ಅಲ್ಬೇನಿಯಾದಲ್ಲಿ ಭುಗಿಲೆದ್ದಿರುವ ಜನಾಕ್ರೋಶ ಹಿಂಸಾರೂಪಕ್ಕೆ ತಿರುಗಿದ್ದು, ಉದ್ರಿಕ್ತ ಪ್ರತಿಭಟನಾಕಾರರು ದೇಶದ ಸುಪ್ರೀಂ ಕೋರ್ಟ್ ಕಟ್ಟಡ ಸೇರಿದಂತೆ ಪ್ರಮುಖ ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದಾರೆ.
ಪ್ರಧಾನಿ ಎಡಿ ರಾಮಾ ಅವರ ರಾಜೀನಾಮೆಗೆ ಆಗ್ರಹಿಸಿ ಕಳೆದ ಐದು ದಿನಗಳಿಂದ ರಾಜಧಾನಿ ತಿರಾನಾದಲ್ಲಿ ಸತತ ಹೋರಾಟ ನಡೆಯುತ್ತಿದೆ. ಅ. 17ರಂದು ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ರೊಚ್ಚಿಗೆದ್ದ ಪ್ರತಿಭಟನಾಕಾರರು ಸುಪ್ರೀಂ ಕೋರ್ಟ್ ಕಚೇರಿಗಳ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.
ಸುಪ್ರೀಂ ಕೋರ್ಟ್ ಮಾತ್ರವಲ್ಲದೆ, ಬ್ಯಾಂಕ್ ಆಫ್ ಅಲ್ಬೇನಿಯಾದ ಪ್ರವೇಶ ದ್ವಾರ ಹಾಗೂ ಶಿಕ್ಷಣ ಸಚಿವಾಲಯದ ಕಟ್ಟಡಗಳ ಮೇಲೂ ಪ್ರತಿಭಟನಾಕಾರರು ಬೆಂಕಿ ಹಚ್ಚಿ, ವ್ಯಾಪಕ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಿದ್ದಾರೆ.











