
ವಾಷಿಂಗ್ಟನ್ : ರಷ್ಯಾದಿಂದ ತೈಲ ಖರೀದಿಸುವ ಭಾರತದ ನಿರ್ಧಾರಕ್ಕೆ ಅಮೆರಿಕದ ನಿರ್ಬಂಧಗಳು ಮತ್ತೊಮ್ಮೆ ಸವಾಲಾಗಿವೆ. ಆದರೆ ಭಾರತವು ರಷ್ಯಾದ ಇಂಧನದ ಮೇಲಿನ ಅವಲಂಬನೆಯನ್ನು ತಕ್ಷಣವೇ ಕಡಿಮೆ ಮಾಡುವುದು ಕಷ್ಟ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ತಿಳಿಸಿದ್ದಾರೆ.
“ರಷ್ಯಾ ಮತ್ತು ಇರಾನ್ ವಿರುದ್ಧದ ನಿರ್ಬಂಧಗಳ ಪರಿಣಾಮವನ್ನು ಪರಿಶೀಲಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ 60 ದಿನಗಳ ಕಾಲಾವಕಾಶ ತೆಗೆದುಕೊಳ್ಳಲು ಬಯಸಿದ್ದಾರೆ. ಭಾರತವು ರಷ್ಯಾದಿಂದ ಪಡೆಯುತ್ತಿರುವ ಇಂಧನವನ್ನು ಒಂದೇ ದಿನದಲ್ಲಿ ನಿಲ್ಲಿಸುವುದು ಸುಲಭವಲ್ಲ. ದೇಶದ ಇಂಧನ ಅಗತ್ಯಗಳು, ಜಾಗತಿಕ ಮಾರುಕಟ್ಟೆಯ ಪರಿಸ್ಥಿತಿ ಮತ್ತು ಅಮೆರಿಕದ ಆರ್ಥಿಕ ಹಿತಾಸಕ್ತಿಗಳನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳಬೇಕಿದೆ” ಎಂದು ಹೇಳಿದರು.
“ಭಾರತವು ಅಮೆರಿಕದ ಪ್ರಮುಖ ಪಾಲುದಾರ ದೇಶವಾಗಿದೆ. ಭಾರತದ ಇಂಧನ ಅಗತ್ಯಗಳನ್ನು ಗಮನಿಸಿದರೆ ರಷ್ಯಾದಿಂದ ತೈಲ ಖರೀದಿಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಒತ್ತಾಯಿಸುವುದು ಸುಲಭವಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.
ರಷ್ಯಾ ಮತ್ತು ಇರಾನ್ ಮೇಲೆ ನಿರ್ಬಂಧ ವಿಧಿಸುವ ಕಾಯ್ದೆಯು ರಷ್ಯಾದ ತೈಲ ಮತ್ತು ನೈಸರ್ಗಿಕ ಅನಿಲವನ್ನು ಖರೀದಿಸುವ ದೇಶಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಲು ಅಮೆರಿಕ ಅಧ್ಯಕ್ಷರಿಗೆ ಅಧಿಕಾರ ನೀಡುತ್ತದೆ. ಅದರಂತೆ ಭಾರತ, ಚೀನಾ ಸೇರಿದಂತೆ ರಷ್ಯಾದಿಂದ ತೈಲ ಖರೀದಿಸುವ ಪ್ರಮುಖ ದೇಶಗಳಿಗೆ ಅಮೆರಿಕಕ್ಕೆ ಆಮದು ಆಗುವ ಸರಕುಗಳ ಮೇಲೆ ಶೇಕಡಾ 100ರಷ್ಟು ಸುಂಕ ವಿಧಿಸುವ ಅವಕಾಶವೂ ಈ ಕಾಯ್ದೆಯಲ್ಲಿದೆ ಎನ್ನಲಾಗಿದೆ.











