
ಚಿಕಾಗೋ : ಅಮೆರಿಕದ ಇಲಿನಾಯ್ಸ್ ರಾಜ್ಯದ ಅರೋರಾ ಪ್ರದೇಶದಲ್ಲಿರುವ ಹಿಂದೂ ದೇವಾಲಯವೊಂದರ ಮೇಲೆ ಸಾಮೂಹಿಕ ಗುಂಡಿನ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಭಾರತೀಯ ಮೂಲದವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಯೋಜಿಸಿದ್ದ ಆರೋಪ ಕೇಳಿಬಂದಿದ್ದು, ಈ ಘಟನೆ ಅಮೆರಿಕದಲ್ಲಿರುವ ಭಾರತೀಯ ಸಮುದಾಯದಲ್ಲಿ ಆತಂಕ ಮೂಡಿಸಿದೆ. ಬಂಧಿತನನ್ನು ಪ್ಯಾಲಟೈನ್ ನಿವಾಸಿ ಅಲೆಕ್ಸಾಂಡ್ರೋಸ್ ಪಪೊರಾಕಿಸ್ ಎಂದು ಗುರುತಿಸಲಾಗಿದೆ. ಸಹೋದ್ಯೋಗಿಯೊಬ್ಬ ನೀಡಿದ ತುರ್ತು ಮಾಹಿತಿಯ ಆಧಾರದಲ್ಲಿ ಪೊಲೀಸರು ಹಾಗೂ ಎಫ್ಬಿಐ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಪ್ಯಾಲಟೈನ್ನ ಟ್ಯಾಕೋ ಬೆಲ್ ಫಾಸ್ಟ್ಫುಡ್ ಮಳಿಗೆಯಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ ಪಪೊರಾಕಿಸ್, ತನ್ನ ದಾಳಿಯ ಯೋಜನೆಗೆ ಸಂಬಂಧಿಸಿದ ದಾಖಲೆಗಳು, ರೈಫಲ್ ಮತ್ತು ಗುಂಡು ತುಂಬಿದ ಮ್ಯಾಗಜೀನ್ಗಳ ಫೋಟೋಗಳನ್ನು ಸಹೋದ್ಯೋಗಿಯೊಬ್ಬನಿಗೆ ಕಳುಹಿಸಿದ್ದ ಎನ್ನಲಾಗಿದೆ. ಅಲ್ಲದೆ, ಭಾನುವಾರ ತನಗೆ ವಿಶೇಷ ದಿನವಾಗಿರಲಿದೆ ಎಂದು ಹೇಳಿಕೊಂಡಿದ್ದ ಎಂದು ವರದಿಯಾಗಿದೆ. ಈ ಮಾಹಿತಿ ಪಡೆದ ಸಹೋದ್ಯೋಗಿ ತಕ್ಷಣ ಪೊಲೀಸರಿಗೆ ತಿಳಿಸಿದ್ದಾನೆ. ಬಳಿಕ ಪ್ಯಾಲಟೈನ್ ಮತ್ತು ಮೌಂಟ್ ಪ್ರಾಸ್ಪೆಕ್ಟ್ ಪೊಲೀಸ್ ಇಲಾಖೆಗಳು ಹಾಗೂ ಎಫ್ಬಿಐ ಜಂಟಿಯಾಗಿ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿವೆ.
ಹಿಂದೂ ಅಮೆರಿಕನ್ ಫೌಂಡೇಶನ್ ಹಾಗೂ ತನಿಖಾಧಿಕಾರಿಗಳ ಪ್ರಕಾರ, ಅಕ್ಟೋಬರ್ 11ರಂದು ಮುಂಜಾನೆ ಆರೋಪಿ ಶಸ್ತ್ರಸಜ್ಜಿತನಾಗಿ ಅರೋರಾದ ಹಿಂದೂ ದೇವಾಲಯದ ಆವರಣಕ್ಕೆ ತೆರಳಿದ್ದ ಎನ್ನಲಾಗಿದೆ. ಆದರೆ ಆತನ ಬಂದೂಕು ಜಾಮ್ ಆಗಿದ್ದರಿಂದ ದಾಳಿ ನಡೆಸಲು ಸಾಧ್ಯವಾಗದೆ ಸ್ಥಳದಿಂದ ಪರಾರಿಯಾಗಿದ್ದ ಎಂದು ಆರೋಪಿಸಲಾಗಿದೆ.
ಬಳಿಕ ಆತ ತನ್ನ ಸಹೋದ್ಯೋಗಿಗೆ ಕರೆ ಮಾಡಿ, ಬಂದೂಕು ಜಾಮ್ ಆಗಿದ್ದರಿಂದ ಅಲ್ಲಿಂದ ತಪ್ಪಿಸಿಕೊಂಡು ಬಂದಿರುವುದಾಗಿ ಹೇಳಿಕೊಂಡಿದ್ದ ಎನ್ನಲಾಗಿದೆ. ಈ ಮಾಹಿತಿ ಪೊಲೀಸರ ತನಿಖೆಗೆ ಪ್ರಮುಖ ಸುಳಿವಾಯಿತು. ಅಕ್ಟೋಬರ್ 11ರ ಸಂಜೆ ಆರೋಪಿ ತನ್ನ ಮನೆಯಿಂದ ಹೊರಬರುತ್ತಿದ್ದ ವೇಳೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಮನೆಯ ಶೋಧದ ವೇಳೆ 16 ಇಂಚಿಗಿಂತ ಕಡಿಮೆ ಉದ್ದದ ಬ್ಯಾರೆಲ್ ಹೊಂದಿರುವ ಶಾರ್ಟ್-ಬ್ಯಾರೆಲ್ ರೈಫಲ್, ನೂರಾರು ಜೀವಂತ ಗುಂಡುಗಳು, ಯುದ್ಧತಂತ್ರದ ಜಾಕೆಟ್ ಹಾಗೂ ನವ-ನಾಜಿ ಸಿದ್ಧಾಂತಕ್ಕೆ ಸಂಬಂಧಿಸಿದ ಚಿಹ್ನೆಗಳುಳ್ಳ ಪ್ಯಾಚ್ಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.
ಆರೋಪಿಯನ್ನು ಬುಧವಾರ ಕುಕ್ ಕೌಂಟಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಜಾಮೀನು ರಹಿತ ಬಂಧನಕ್ಕೆ ಆದೇಶಿಸಿದೆ ಎಂದು ವರದಿಯಾಗಿದೆ. ಮುಂದಿನ ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ನಿಗದಿಪಡಿಸಲಾಗಿದೆ. ಆರೋಪಿಯ ವಿರುದ್ಧ ಕಾನೂನುಬಾಹಿರವಾಗಿ ಮಾರಕಾಸ್ತ್ರ ಹೊಂದಿರುವುದು ಹಾಗೂ ಭಯೋತ್ಪಾದಕ ಬೆದರಿಕೆಗೆ ಸಂಬಂಧಿಸಿದ ಆರೋಪಗಳನ್ನು ದಾಖಲಿಸಲಾಗಿದೆ ಎನ್ನಲಾಗಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಎಫ್ಬಿಐ ತನಿಖೆ ಮುಂದುವರಿಸಿದ್ದು, ದ್ವೇಷಾಪರಾಧಕ್ಕೆ ಸಂಬಂಧಿಸಿದ ಹೆಚ್ಚುವರಿ ಫೆಡರಲ್ ಆರೋಪಗಳ ಸಾಧ್ಯತೆಯನ್ನೂ ಪರಿಶೀಲಿಸುತ್ತಿದೆ.
ನವರಾತ್ರಿ ಮತ್ತು ದೀಪಾವಳಿ ಹಬ್ಬಗಳ ಸಂಭ್ರಮ ಆರಂಭವಾಗುತ್ತಿರುವ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿರುವುದು ಅಮೆರಿಕದ ಭಾರತೀಯ ಸಮುದಾಯದಲ್ಲಿ ಕಳವಳ ಮೂಡಿಸಿದೆ. ಇದಕ್ಕೂ ಮುನ್ನ, ಓಹಿಯೋ ರಾಜ್ಯದ ರಿಚ್ಮಂಡ್ ಹೈಟ್ಸ್ನಲ್ಲಿರುವ ಶ್ರೀ ಸ್ವಾಮಿನಾರಾಯಣ ವಡ್ತಲ್ ಧಾಮ್ ಹಿಂದೂ ದೇವಾಲಯವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿ ವಿರೂಪಗೊಳಿಸಿದ ಘಟನೆ ವರದಿಯಾಗಿತ್ತು. ಇದೀಗ ಮತ್ತೊಂದು ದೇವಾಲಯದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ ಆರೋಪ ಕೇಳಿಬಂದಿರುವುದು ಆತಂಕವನ್ನು ಹೆಚ್ಚಿಸಿದೆ.
ಘಟನೆಯ ಬಳಿಕ ಚಿಕಾಗೋ, ಅರೋರಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಹಿಂದೂ ದೇವಾಲಯಗಳು ಮತ್ತು ಭಾರತೀಯ ಸಮುದಾಯ ಕೇಂದ್ರಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ವರದಿಯಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಹಿಂದೂ ಅಮೆರಿಕನ್ ಫೌಂಡೇಶನ್ ಸಮುದಾಯದ ಸದಸ್ಯರಿಗೆ ಮನವಿ ಮಾಡಿದೆ.











