ಬ್ಯಾಂಕ್ ಆಫ್ ಬರೋಡಾ ವಿರುದ್ಧ ಕೋರ್ಟ್ ಮೊರೆ ಹೋದ ಬಿ.ಆರ್. ಶೆಟ್ಟಿ – 1.44 ಲಕ್ಷ ಕೋಟಿ ರೂ ಮೊಕದ್ದಮೆ – ಕಹಳೆ ನ್ಯೂಸ್

ಮುಂಬೈ :ಎನ್ಎಂಸಿ ಹೆಲ್ತ್ಕೇರ್ ಸಂಸ್ಥಾಪಕ ಬಿ.ಆರ್. ಶೆಟ್ಟಿ ಅವರು ಬಾಂಬೆ ಹೈಕೋರ್ಟ್ನಲ್ಲಿ ಬ್ಯಾಂಕ್ ಆಫ್ ಬರೋಡಾ ಮತ್ತಿತರರ ವಿರುದ್ಧ 15 ಬಿಲಿಯನ್ ಡಾಲರ್ (ಸುಮಾರು 1.44 ಲಕ್ಷ ಕೋಟಿ ರೂ) ಮೊಕದ್ದಮೆ ಹೂಡಿದ್ದಾರೆ.
ಇದರ ಬೆನ್ನಲ್ಲೇ ಈ ಸರ್ಕಾರಿ ಬ್ಯಾಂಕ್ನ ಷೇರು ಮೌಲ್ಯವು ಇವತ್ತಿನ ವಹಿವಾಟಿನಲ್ಲಿ ಶೇ. 3ರಷ್ಟು ಕುಸಿದಿದೆ. ನಿನ್ನೆ 238 ರೂ ಬೆಲೆಯಲ್ಲಿ ಅಂತ್ಯಗೊಂಡಿದ್ದ ಬ್ಯಾಂಕ್ ಆಫ್ ಬರೋಡಾದ ಶೇರುಬೆಲೆ ಇವತ್ತು 229 ರೂ ಇದೆ.
ಕರ್ನಾಟಕ ಮೂಲದವರಾದ ಮತ್ತು ಯುಎಇಯಲ್ಲಿ ಅತಿದೊಡ್ಡ ಉದ್ಯಮಿಗಳಲ್ಲಿ ಒಬ್ಬರೆನಿಸುವ ಮಟ್ಟಕ್ಕೆ ಏರಿದ, ಹಾಗೂ ಎನ್ಎಂಸಿ ಹೆಲ್ತ್ಕೇರ್ ಮತ್ತು ಯುಎಇ ಎಕ್ಸ್ಚೇಂಜ್ನ ಸಂಸ್ಥಾಪಕರಾದ ಬಿ.ಆರ್. ಶೆಟ್ಟಿ ಅವರು ತಮಗಾದ ನಷ್ಟಗಳಿಗೆ ಪರಿಹಾರ ಕೋರಿ ಈ ಬೃಹತ್ ಮೊತ್ತದ ಮೊಕದ್ದಮೆ ದಾಖಲಿಸಿದ್ದಾರೆ.
ಬ್ಯಾಂಕ್ ಆಫ್ ಬರೋಡಾ ಹಾಗೂ ಅದರ ಕೆಲವು ಅಧಿಕಾರಿಗಳು ತಮ್ಮ ಗ್ರೂಪ್ ಕಂಪನಿಗಳಿಗೆ ಸಂಬಂಧಿಸಿದ ವಂಚನೆಯ ವಹಿವಾಟುಗಳಿಗೆ ಸಹಕರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಸಪ್ಲೈಯರ್ಗಳೆನ್ನಲಾದವರಿಗೆ ಸಂಬಂಧಿಸಿದ ಅಕೌಂಟ್ಗಳ ಮೂಲಕ ಅಕ್ರಮವಾಗಿ ಫಂಡ್ಗಳನ್ನು ವರ್ಗಾಯಿಸಲು ಅವಕಾಶ ಮಾಡಿಕೊಡಲಾಗಿತ್ತು. ಅಕ್ರಮ ಹಣ ವರ್ಗಾವಣೆ ನಡೆಯುತ್ತಿದೆ ಎಂಬ ದೂರುಗಳನ್ನು ಸರಿಯಾಗಿ ವಿಚಾರಿಸಲು ಬ್ಯಾಂಕ್ ವಿಫಲವಾಯಿತು ಎಂಬುದು ಬಿಆರ್ ಶೆಟ್ಟಿ ಅವರ ಆರೋಪ ಅಗಿದೆ.
ಅಷ್ಟೇ ಅಲ್ಲ, ತಮ್ಮ ಸಹಿಯನ್ನು ನಕಲುಗೊಳಿಸಿ ನೀಡಲಾದ ಪರ್ಸನಲ್ ಗ್ಯಾರಂಟಿಗಳನ್ನು ಬಳಸಿ ಸಾಲಗಳನ್ನು ಪಡೆಯಲಾಗಿದೆ ಎಂದು ಶೆಟ್ಟಿ ಆರೋಪಿಸಿದ್ದಾರೆ. ಸಂಬಂಧಪಟ್ಟ ಬ್ಯಾಂಕ್ ದಾಖಲೆಗಳು ಹಾಗೂ ಆಂತರಿಕ ನಿಯಮಗಳ ದಾಖಲೆಗಳನ್ನು ಬಹಿರಂಗಪಡಿಸಬೇಕೆಂದೂ ಅವರು ಒತ್ತಾಯಿಸಿದ್ದಾರೆ.
ಈ ಅಕ್ರಮ ವಹಿವಾಟುಗಳಿಂದ ತಮಗೆ ಹಾಗೂ ತಮ್ಮ ಸಂಸ್ಥೆಗಳಿಗೆ ಆಗಿರುವ ನೇರ ನಷ್ಟಕ್ಕೆ 5 ಬಿಲಿಯನ್ ಡಾಲರ್, ವ್ಯಾಪಾರ ಅವಕಾಶಗಳ ನಷ್ಟಕ್ಕೆ 5 ಬಿಲಿಯನ್ ಡಾಲರ್, ಹಾಗೂ ಮಾರುಕಟ್ಟೆಯಲ್ಲಿ ಉಂಟಾದ ಅಪಕೀರ್ತಿಗೆ ಪರಿಹಾರವಾಗಿ 5 ಬಿಲಿಯನ್ ಡಾಲರ್, ಹೀಗೆ ಒಟ್ಟು 15 ಬಿಲಿಯನ್ ಡಾಲರ್ ಮೊತ್ತದ ನಷ್ಟ ಪರಿಹಾರ ಕೊಡಿಸಬೇಕು, ಈ ಮೊತ್ತಕ್ಕೆ ವಾರ್ಷಿಕ ಶೇ. 18 ಬಡ್ಡಿಯನ್ನೂ ಒಳಗೊಳ್ಳಬೇಕು ಎಂದು ಕೋರಿ ಬಿಆರ್ ಶೆಟ್ಟಿ ಅವರು ಬಾಂಬೆ ಕೋರ್ಟ್ನಲ್ಲಿ ಮೊಕದ್ದಮೆ ಹಾಕಿದ್ದಾರೆ.
ಬಿಆರ್ ಶೆಟ್ಟಿ ಅವರ ಈ ಆರೋಪಗಳನ್ನು ಬ್ಯಾಂಕ್ ಆಫ್ ಬರೋಡಾ ಸಾರಾಸಗಟಾಗಿ ತಿರಸ್ಕರಿಸಿದೆ. ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಬ್ಯಾಂಕ್ ಆಫ್ ಬರೋಡಾ, ತಮಗೆ ಈವರೆಗೆ ಅಧಿಕೃತವಾಗಿ ಯಾವುದೇ ಮೊಕದ್ದಮೆಯ ಪ್ರತಿ ತಲುಪಿಲ್ಲ. ಅವರು ಮಾಡಿರುವ ಎಲ್ಲಾ ಆರೋಪಗಳಿಗೆ ಕೋರ್ಟ್ನಲ್ಲಿ ಸಮರ್ಥವಾಗಿ ಉತ್ತರ ಕೊಡುವುದಾಗಿ ಸ್ಪಷ್ಟಪಡಿಸಿದೆ.
ಈ ಆರೋಪಗಳು ಯಾವುದೇ ಕೋರ್ಟ್ನಲ್ಲಿ ಚರ್ಚಿತವಾಗಿಲ್ಲ. ಹೀಗಾಗಿ, ಅವುಗಳ ಬಗ್ಗೆ ಸದ್ಯ ಪ್ರತಿಕ್ರಿಯೆ ನೀಡುವುದಿಲ್ಲ. ತಮಗೆ ಮೊಕದ್ದಮೆಯ ದಾಖಲೆ ತಲುಪಿದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ತಿಳಿಸಿದೆ.
2024ರ ಜುಲೈನಲ್ಲಿ ನ್ಯೂಯಾರ್ಕ್ನಲ್ಲಿ ಬಿ.ಆರ್. ಶೆಟ್ಟಿ ಅವರು ಸಲ್ಲಿಸಿದ ಮೊಕದ್ದಮೆ ವಜಾಗೊಂಡಿತ್ತು. ಆ ಮೊಕದ್ದಮೆಯಲ್ಲಿ ಇದೇ ರೀತಿಯ ಆರೋಪಗಳಿದ್ದವು. ಹೀಗಾಗಿ, ಬಾಂಬೆ ಹೈಕೋರ್ಟ್ನಲ್ಲೂ ತಮಗೆ ಗೆಲುವು ಸಿಗುವ ವಿಶ್ವಾಸ ಇದೆ ಎಂದು ಬ್ಯಾಂಕ್ ಆಫ್ ಬರೋಡಾ ನಿರೀಕ್ಷೆ ಇಟ್ಟುಕೊಂಡಿದೆ. ಬಿ.ಆರ್. ಶೆಟ್ಟಿ ಅವರಿಂದ ಬ್ಯಾಂಕಿಗೆ ಬರಬೇಕಿರುವ ಸುಮಾರು 2,800 ಕೋಟಿಗಳಷ್ಟು ಬಾಕಿ ಹಣದ ವಸೂಲಾತಿಗಾಗಿ ಭಾರತ ಹಾಗೂ ಯುಎಇ ದೇಶಗಳಲ್ಲಿ ಕಾನೂನು ಕ್ರಮಗಳನ್ನು ಮುಂದುವರಿಸಲಾಗಿದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.











