Thursday, October 15, 2026
ಸುದ್ದಿ

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿವೇಕ ಸ್ಮೃತಿ ಸರಣಿ ಕಾರ್ಯಕ್ರಮ : ಪರಮ ಜ್ಞಾನ ಸಿದ್ಧಿಸಿ ಜಗತ್ತಿಗೆ ಪ್ರೇರಣೆಯಾದವರು ವಿವೇಕಾನಂದರು : ಪ್ರೊ.ಪವನ್ ಕಿರಣಕೆರೆ- ಕಹಳೆ ನ್ಯೂಸ್

ಪುತ್ತೂರು : ದೇವರ ಕುರಿತಾಗಿ ಪ್ರಶ್ನಿಸುವ ಮೂಲಕ ಜೀವನದ ಸಾರವನ್ನು ಅರ್ಥೈಸಿಕೊಂಡವರು ಸ್ವಾಮಿ ವಿವೇಕಾನಂದರು. ಅವರು ತಮ್ಮ ಗುರು ರಾಮಕೃಷ್ಣ ಪರಮಹಂಸರ ಮಾರ್ಗದರ್ಶನದಿಂದ ದೈವಿಕ ಅನುಭವವನ್ನು ಪಡೆದು ಪರಮ ಜ್ಞಾನವನ್ನು ಸಿದ್ಧಿಸಿಕೊಂಡು ಜಗತ್ತಿಗೆ ಪ್ರೇರಣೆಯಾದವರು. ಸ್ವಾಮಿ ವಿವೇಕಾನಂದರ ಬದುಕಿನಲ್ಲಿ ದಕ್ಷಿಣೇಶ್ವರದ ಕಾಳಿಕಾಮಾತೆಯ ದರ್ಶನ ತಂದ ಜ್ಞಾನ ಮತ್ತು ವೈರಾಗ್ಯದ ದಾರಿ ಅವರ ಜೀವನವನ್ನು ರೂಪಿಸಿತು. ಅಂತೆಯೇ ನಾವು ನಮ್ಮ ಸಂಸ್ಕೃತಿಯ ಬಗ್ಗೆ ಧೃಢವಾದ ನಂಬಿಕೆಯಿಟ್ಟಾಗ ಅದುವೇ ನಮಗೆ ಶಕ್ತಿಯಾಗಬಲ್ಲದು ಎಂದು ವಾಗ್ಮಿ ಹಾಗೂ ಕಲ್ಮಾಡಿಯ ಆಸೆಮ್ಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪ್ರೊ. ಪವನ್ ಕಿರಣಕೆರೆ ನುಡಿದರು.

ಜಾಹೀರಾತು

ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಹಾಗೂ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಿವೇಕಾನಂದ  ಸಂಶೋಧನಾ ಕೇಂದ್ರ ಹಾಗೂ ಐಕ್ಯೂಎಸಿಯ ಸಹಯೋಗದೊಂದಿಗೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ‘ವಿವೇಕ ಸ್ಮೃತಿ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಶಕ್ತಿ ಎಂದರೆ ಚೈತನ್ಯಶೀಲವಾದುದು ಹಾಗೂ ಇದೇ ಶಕ್ತಿಯಿಂದ ಸ್ಫೂರ್ತಿ ಪಡೆದ ಸ್ವಾಮಿ ವಿವೇಕಾನಂದರು ಭಾರತೀಯ ತತ್ವಗಳನ್ನು ಜಗತ್ತಿಗೆ ಸಾರಿದವರು. ವಿವೇಕ ಎನ್ನುವ ಪದದಲ್ಲೇ ಜೀವನದಲ್ಲಿ ಯಾವುದು ನಿಜಾರ್ಥದ ಸುಖ ಎಂಬುದರಿಂದ ತೊಡಗಿ ಎಲ್ಲವೂ ಅಡಕವಾಗಿದೆ ಹಾಗೂ ಅಂತಹಾ ವಿವೇಕದಿಂದ ಆನಂದ ಲಭಿಸುತ್ತದೆ. ನಾವು ನಮ್ಮ ಜೀವನದಲ್ಲಿ ಹೊಸ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ ಸಂಸ್ಕೃತಿಯ ಮೇಲೆ ಧೃಢ ನಂಬಿಕೆಯಿಟ್ಟಾಗ ಆಗುವ ಪರಿಣಾಮಗಳನ್ನು ಕಂಡುಕೊಳ್ಳುತ್ತಾ ಸಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ.ಪಿ ಭಾರತ ದೇಶವೆಂದರೆ ತಾಯ್ತನದ ಪ್ರತೀಕವಾಗಿದೆ. ಸ್ವಾಮಿ ವಿವೇಕಾನಂದರು ಭಾರತದ ಕೀರ್ತಿಯನ್ನು ಜಗತ್ತಿಗೆ ಪಸರಿಸಿ ಭಾರತೀಯರನ್ನು ಜಾಗೃತರನ್ನಾಗಿಸಿದವರು. ನಮ್ಮ ದೇಶದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಭಾರತವನ್ನು ತಾಯಿ ಎಂತೆ ಕಂಡ ವಿವೇಕಾನಂದರಂತಹಾ ಅನೇಕರು ಕಾರಣ. ಇದು ಅನೇಕ ರಾಜ್ಯಗಳನ್ನೊಳಗೊಂಡ ಭೂಪ್ರದೇಶವಷ್ಟೇ ಅಲ್ಲ ಬದಲಾಗಿ ಮೌಲ್ಯಯುತ
ಸಂಸ್ಕೃತಿ ಇರುವ ನಾಡು ಎನಿಸಿದೆ. ನಮ್ಮ ವೈಯುಕ್ತಿಕ ವಿಚಾರಧಾರೆಗಳು ಭಿನ್ನವಾದರೂ ಕೂಡಾ ಭಾರತೀಯರಾಗಿ ನಾವು ದೇಶಾಭಿಮಾನವನ್ನು ಮೈಗೂಡಿಸಿಕೊಂಡು ಒಂದಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ್ ಭಟ್ ಹಾಗು ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದೇವಿಚರಣ್ ರೈ ಉಪಸ್ಥಿತರಿದ್ದರು.