Sunday, October 11, 2026
ಸುದ್ದಿ

ಕೇರಳದಲ್ಲಿ ಭಾರೀ ಗಾಳಿಗೆ ಹಾರಿಬಿದ್ದ ಶಾಲೆಯ ಮೇಲ್ಛಾವಣಿ – ಮೂರು ಕಾರುಗಳು ಜಖಂ – ಕಹಳೆ ನ್ಯೂಸ್

ತಿರುವನಂತಪುರಂ: ಕೇರಳದ  ಕಣ್ಣೂರು  ಜಿಲ್ಲೆಯ ಶಾಲೆಯೊಂದರಲ್ಲಿ ಭಾರೀ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ದಿಢೀರ್ ಬೀಸಿದ ಬಿರುಗಾಳಿಯ ರಭಸಕ್ಕೆ ಶಾಲೆಯ ಬೃಹತ್ ಲೋಹದ ಮೇಲ್ಛಾವಣಿ (School Roof) ಹಾರಿ, ಸಮೀಪದ ಕಟ್ಟಡದ ಮೇಲೆ ಬಿದ್ದಿದೆ. ಈ ವೇಳೆ ಕಟ್ಟಡದ ಕೆಳಗೆ ನಿಲ್ಲಿಸಿದ್ದ ಮೂರು ಕಾರುಗಳು ಜಖಂಗೊಂಡಿವೆ.
ಶುಕ್ರವಾರ ಮಧ್ಯಾಹ್ನ ಸುಮಾರು 12:30ರ ವೇಳೆಗೆ ಉಲಿಕ್ಕಲ್‌ನ ವಯತುರ್ ಯುಪಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ದಿಢೀರ್ ಬೀಸಿದ ಸುಂಟರಗಾಳಿ ಸಹಿತ ಭಾರೀ ಮಳೆಯಿಂದಾಗಿ ಕೆಲವೇ ನಿಮಿಷಗಳಲ್ಲಿ ಶಾಲೆಯ ಆವರಣದಲ್ಲಿ ಅಪಾರ ಹಾನಿ ಸಂಭವಿಸಿದೆ.

ಜಾಹೀರಾತು

ಸುಮಾರು 15 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಶಾಲೆಯ ಬೃಹತ್ ಕಮಾನು ಆಕಾರದ ಮೇಲ್ಛಾವಣಿ ಗಾಳಿಯ ರಭಸಕ್ಕೆ ಹಾರಿಹೋಗಿದೆ. ಬಳಿಕ ಶಾಲೆಯ ಹಿಂಭಾಗದಲ್ಲಿದ್ದ ಕಟ್ಟಡದ ಮೇಲೆ ಬಿದ್ದಿದೆ. ಈ ವೇಳೆ ಕಟ್ಟಡದ ಕೆಳಗೆ ನಿಲ್ಲಿಸಲಾಗಿದ್ದ ಮೂರು ಕಾರುಗಳು ತೀವ್ರವಾಗಿ ಜಖಂಗೊಂಡಿವೆ. ಶಾಲೆಯಲ್ಲಿ ಮಕ್ಕಳು ಆಟವಾಡುವ ಸ್ಥಳದ ಸಮೀಪವೇ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಕೆಲವೇ ನಿಮಿಷಗಳ ವ್ಯತ್ಯಾಸವಾಗಿದ್ದರೂ ಮಕ್ಕಳು ಅದೇ ಪ್ರದೇಶದಲ್ಲಿ ಆಟವಾಡುತ್ತಿದ್ದರು. ಆಗ ಮೇಲ್ಛಾವಣಿ ಮಕ್ಕಳ ಮೇಲೆ ಬಿದ್ದಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅದೃಷ್ಟವಶಾತ್ ಘಟನೆಯ ಸಮಯದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮೇಲ್ಛಾವಣಿಯ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಹಾನಿಗೊಳಗಾದ ವಾಹನಗಳನ್ನು ಅಲ್ಲಿಂದ ತೆರವುಗೊಳಿಸಲಾಗಿದೆ. ಸುಮಾರು 15 ನಿಮಿಷಗಳ ಕಾಲ ಬೀಸಿದ ಈ ಬಿರುಗಾಳಿಯಿಂದ ಉಲಿಕ್ಕಲ್, ಇರಿಟ್ಟಿ ಸೇರಿದಂತೆ ಕಣ್ಣೂರಿನ ಗುಡ್ಡಗಾಡು ಪ್ರದೇಶಗಳಲ್ಲಿಯೂ ಹಾನಿ ಸಂಭವಿಸಿದೆ ಎಂದು ವರದಿಯಾಗಿದೆ.