ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ- ಕಹಳೆ ನ್ಯೂಸ್

ನವದೆಹಲಿ : ಗಾಂಧಿ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಬ್ಬರು ನಾಯಕರನ್ನು ಸ್ಮರಿಸಿದ್ದಾರೆ. ಜೊತೆಗೆ ಇಬ್ಬರೂ ನಾಯಕರಿಗೆ ಗೌರವ ನಮನ ಸಲ್ಲಿಸಿದರು.
ಪ್ರಧಾನಿ ಮೋದಿ ಅವರು ರಾಜ್‌ಘಾಟ್‌ಗೆ ಆಗಮಿಸಿ, ಮಹಾತ್ಮ ಗಾಂಧೀಜಿಯವರ ಸಮಾಧಿಯ ಬಳಿ ನಡೆದ ಸರ್ವಧರ್ಮ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಅಂಗವಾಗಿ ವಿಜಯ್ ಘಟ್‌ನಲ್ಲಿ ಅವರಿಗೆ ಗೌರವ ನಮನ ಸಲ್ಲಿಸಿದರು.
“ಬಾಪು ಅವರ ಶಾಶ್ವತ ಸಂದೇಶವು ಉತ್ತಮ ಸಮಾಜ ಮತ್ತು ವಿಕಸಿತ ಭಾರತ ನಿರ್ಮಾಣದತ್ತ ನಮ್ಮನ್ನು ಮುನ್ನಡೆಸಲಿ. ಗಾಂಧೀಜಿಯವರ ಜೀವನದಲ್ಲಿ ಸರಳತೆ, ಧೈರ್ಯ, ಸೇವೆ ಮತ್ತು ಮಾನವೀಯತೆಗೆ ವಿಶೇಷ ಸ್ಥಾನವಿತ್ತು” ಎಂದು ಮೋದಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಸ್ಮರಿಸಿದ ಮೋದಿ, “ಅವರ ಸರಳ ಜೀವನ, ಪ್ರಾಮಾಣಿಕತೆ ಮತ್ತು ದೇಶದ ಮೇಲಿನ ಸಮರ್ಪಣೆ ಇಂದಿಗೂ ಜನರಿಗೆ ಸ್ಫೂರ್ತಿ ನೀಡುತ್ತಿದೆ. ಶಾಸ್ತ್ರಿಜಿ ನೀಡಿದ ‘ಜೈ ಜವಾನ್, ಜೈ ಕಿಸಾನ್’ ಘೋಷಣೆ ದೇಶದ ಸೈನಿಕರು ಮತ್ತು ರೈತರ ಮಹತ್ವವನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು.
ಇನ್ನು ದೆಹಲಿ ಸಿಎಂ ರೇಖಾ ಗುಪ್ತಾ ಅವರು ರಾಜ್‌ಘಾಟ್‌ನಲ್ಲಿ ನಡೆದ ಸರ್ವಧರ್ಮ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಾತ್ಮ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಜೊತೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ತರಂಜಿತ್ ಸಿಂಗ್ ಸಂಧು, ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ಉಪಾಧ್ಯಕ್ಷ ಸಿಪಿ ರಾಧಾಕೃಷ್ಣನ್ ಅವರು ಮಹಾತ್ಮ ಗಾಂಧಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು.










