ವಿಟಿಯು ಘಟಿಕೋತ್ಸವ: ಪಿ.ಎ. ಎಂಜಿನಿಯರಿಂಗ್ ಕಾಲೇಜಿನ ಬಯೋಟೆಕ್ನಾಲಜಿ ವಿದ್ಯಾರ್ಥಿನಿಯರಿಗೆ ಅಗ್ರ ರ‍್ಯಾಂಕ್‌ಗಳ ಗರಿ-ಕಹಳೆ ನ್ಯೂಸ್

ಮಂಗಳೂರು: ಮಂಗಳೂರಿನ ನಡುಪದವಿನ ಪಿ.ಎ. ಎಂಜಿನಿಯರಿಂಗ್ ಕಾಲೇಜಿನ (PACE) ಬಯೋಟೆಕ್ನಾಲಜಿ ವಿಭಾಗದ ವಿದ್ಯಾರ್ಥಿನಿ ಕುಮಾರಿ ಸಲಿಲಾ ಅವರು ಬಿ.ಇ. ಬಯೋಟೆಕ್ನಾಲಜಿ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್ ಹಾಗೂ ಪ್ರತಿಷ್ಠಿತ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (ವಿಟಿಯು) ಸೆಪ್ಟೆಂಬರ್ 26, 2026 ರಂದು ನಡೆದ 26ನೇ ವಾರ್ಷಿಕ ಘಟಿಕೋತ್ಸವದಲ್ಲಿ ಈ ಅತ್ಯುನ್ನತ ಶೈಕ್ಷಣಿಕ ಗೌರವವನ್ನು ಪ್ರದಾನ ಮಾಡಲಾಯಿತು.ಇದೇ ಕಾಲೇಜಿನ ಬಯೋಟೆಕ್ನಾಲಜಿ ವಿಭಾಗದ ಇನ್ನುಳಿದ ಇಬ್ಬರು ವಿದ್ಯಾರ್ಥಿನಿಯರು ಸಹ ವಿಶ್ವವಿದ್ಯಾಲಯದ ರ‍್ಯಾಂಕ್ ಪಟ್ಟಿಯಲ್ಲಿ ಅಗ್ರ ಸ್ಥಾನಗಳನ್ನು ಪಡೆಯುವ ಮೂಲಕ ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಕುಮಾರಿ ವಿದ್ಯಾ J. ಅವರು ಅತ್ಯುತ್ತಮ ಶೈಕ್ಷಣಿಕ ಸಾಧನೆಯೊಂದಿಗೆ ವಿಶ್ವವಿದ್ಯಾಲಯಕ್ಕೆ 2ನೇ ರ‍್ಯಾಂಕ್ ಪಡೆದರೆ, ಕುಮಾರಿ ಆಯಿಷಾ ಅಫ್ರಾ ಅವರು 5ನೇ ರ‍್ಯಾಂಕ್ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.ಅತ್ಯುನ್ನತ ಸಾಧನೆ ಮಾಡಿದ ರ‍್ಯಾಂಕ್ ವಿಜೇತ ವಿದ್ಯಾರ್ಥಿನಿಯರನ್ನು ಪಿ.ಎ. ಎಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದದವರು ಪ್ರಶಂಸಿಸಿದ್ದು, ಅವರ ನಿರಂತರ ಪರಿಶ್ರಮವನ್ನು ಶ್ಲಾಘಿಸಿ ಆತ್ಮೀಯವಾಗಿ ಅಭಿನಂದಿಸಿದ್ದಾರೆ.








