Saturday, November 14, 2026
ಸುದ್ದಿ

ನಮ್ಮ ಮೆಟ್ರೊ ವಿಚಾರದಲ್ಲಿ ರಾಜ್ಯ ಸರಕಾರದ ಕುಚೇಷ್ಟೆ: ಸಂಸದ ತೇಜಸ್ವಿ ಸೂರ್ಯ – ಕಹಳೆ ನ್ಯೂಸ್

ಬೆಂಗಳೂರು: ಬೆಂಗಳೂರು ಮೆಟ್ರೊ ವಿಚಾರದಲ್ಲಿ ರಾಜ್ಯ ಸರಕಾರದ ಕುಚೇಷ್ಟೆ ಮಾಡಿದೆ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಆರೋಪಿಸಿದ್ದಾರೆ.

ಜಾಹೀರಾತು

ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪವರ್ ಪಾಯಿಂಟ್ ಪ್ರಸೆಂಟೇಷನ್ ನೀಡುವ ಮೂಲಕ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರವು ಬೆಂಗಳೂರು ಮೆಟ್ರೊ ರೈಲ್ವೆ ಕಾರ್ಪೊರೇಷನ್‍ಗೆ ಕೊಡಿಸುವ (ಬಿಎಂಆರ್‍ಸಿಎಲ್) ಸುಮಾರು 29 ಸಾವಿರ ಕೋಟಿ ಸಾಲವನ್ನು ಕೇಂದ್ರ ಸರಕಾರದ ಕಾಲಂಗೆ ಹಾಕಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅದನ್ನು ರಾಜ್ಯ ಸರಕಾರದ ಕಾಲಂಗೆ ಹಾಕಿಕೊಂಡಿದ್ದಾರೆ. ಈ ಸಾಲಕ್ಕೆ ಗ್ಯಾರಂಟಿ ಕೊಟ್ಟದ್ದು ಕೇಂದ್ರ ಸರಕಾರ. ಕೇಂದ್ರ ಸರಕಾರವು ಬಿಎಂಆರ್‍ಸಿಎಲ್ ಗೆ ಸಾಲ ಕೊಡಿಸಿದೆ. ಆ ಸಾಲವನ್ನು ರಾಜ್ಯ ಸರಕಾರ ಮರುಪಾವತಿ ಮಾಡುವುದಿಲ್ಲ. ಅದನ್ನು ಬಿಎಂಆರ್‍ಸಿಎಲ್ ಮರುಪಾವತಿ ಮಾಡಲಿದೆ ಎಂದರು.

ಲೆಕ್ಕಪತ್ರ ತೋರಿಸುವಾಗ ಕೇಂದ್ರ ಸರಕಾರದ ಕಾಲಂನಲ್ಲಿ ಇದ್ದ ಮೇಲಿನ ಸಾಲದ ಮೊತ್ತವನ್ನು ರಾಜ್ಯ ಸರಕಾರದ ಕಾಲಂಗೆ ಸ್ಥಳಾಂತರ ಮಾಡಿದ್ದಾರೆ. ಇದರಿಂದ ಲೆಕ್ಕ ಉಲ್ಟಾ ಆಗುತ್ತಿದೆ ಎಂದು ವಿವರಿಸಿದರು. ಬಿಎಂಆರ್‍ಸಿಎಲ್ ಮರುಪಾವತಿ ಮಾಡುವಾಗ ರಾಜ್ಯದ ಪಾಲೆಲ್ಲಿದೆ? ಇದನ್ನು ಬೆಂಗಳೂರಿನ ಸಚಿವರು ಮತ್ತು ಮುಖ್ಯಮಂತ್ರಿಯವರು ತಪ್ಪಾಗಿ ತೋರಿಸಿ, ರಾಜ್ಯ- ಬೆಂಗಳೂರಿನ ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಕೇಂದ್ರದ ಹೂಡಿಕೆಯೇ ಹೆಚ್ಚು..

ಸಂವಿಧಾನದ ಮೇಲೆ ಪ್ರತಿಜ್ಞೆ ಪಡೆದ ಸಚಿವರು ಮತ್ತು ಮುಖ್ಯಮಂತ್ರಿಯವರು ಈ ರೀತಿ ಕುಚೇಷ್ಟೆ ಮಾಡುವುದು ಸರಿಯಲ್ಲ ಎಂದು ನುಡಿದರು. ಬಿಎಂಆರ್‍ಸಿಎಲ್ ದಾಖಲೆಪತ್ರಗಳ ಪ್ರಕಾರ ಕೇಂದ್ರದ ಹೂಡಿಕೆ ಪ್ರಮಾಣ ಶೇ 54 ಹಾಗೂ ರಾಜ್ಯದ ಹೂಡಿಕೆ ಶೇ 46 ಎಂದು ವಿವರ ನೀಡಿದರು. ಬಿಎಂಆರ್‍ಸಿಎಲ್ ಅನ್ನು ಕೇಂದ್ರ- ರಾಜ್ಯ ಸರಕಾರಗಳು ಶೇ 50ರಂತೆ ಹೂಡಿಕೆ ಮಾಡಿ ಮಾಲೀಕತ್ವ ಪಡೆದಿವೆ ಎಂದರು.

ಮೆಟ್ರೊ- ಎಲ್ಲೆಡೆ ಒಂದೇ ವ್ಯವಸ್ಥೆ

ಮೆಟ್ರೊ, ಬೆಂಗಳೂರು, ಕೊಚ್ಚಿ, ದೆಹಲಿ, ಮುಂಬೈ ಮೊದಲಾದೆಡೆ ಇದೇ ವ್ಯವಸ್ಥೆಯಡಿ ನಡೆಯುತ್ತಿದೆ. ಒಟ್ಟು ಹೂಡಿಕೆ 77,891 ಕೋಟಿಯಲ್ಲಿ ಕೇಂದ್ರದ ಪಟ್ಟಿಯಲ್ಲಿದ್ದ ಸುಮಾರು 29 ಸಾವಿರ ಕೋಟಿಯನ್ನು ರಾಜ್ಯ ಸರಕಾರದ ಖಾತೆಗೆ ಸೇರಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ರಾಜ್ಯದ ಗೃಹ ಸಚಿವರಿಂದ ಆರೆಸ್ಸೆಸ್ ಬಗ್ಗೆ ಸುಳ್ಳು ಸುದ್ದಿ

ರಾಜ್ಯದ ಗೃಹ ಸಚಿವರು ಆರೆಸ್ಸೆಸ್ ಮೇಲೆ ಸುಳ್ಳು ಸುದ್ದಿ ಹರಡಿಸುತ್ತಾರೆ. ಗ್ರಾಹಕರ ವ್ಯವಹಾರಗಳ ಸಚಿವರು ಎಥೆನಾಲ್ ಬಗ್ಗೆ ಸುಳ್ಳು ಸುದ್ದಿ ಹರಡಿಸುತ್ತಾರೆ. ಬೆಂಗಳೂರಿನ ಸಚಿವರು ಮತ್ತು ಮುಖ್ಯಮಂತ್ರಿಯವರು ಮೆಟ್ರೊ ವಿಷಯದಲ್ಲಿ ಸುಳ್ಳು ಸುದ್ದಿ ಹರಿಯಬಿಡುತ್ತಾರೆ ಎಂದು ಆರೋಪಿಸಿದರು.

ಕೇಂದ್ರ ಕೊಡಿಸಿದ ಸಾಲವನ್ನು ತಮ್ಮ ಖಾತೆಗೆ ಸೇರಿಸಿದ್ದಾರೆ..

ಕರ್ನಾಟಕದ ಪಾಲು ಶೇ 79ರಿಂದ ಶೇ 87ಕ್ಕೆ ಏರಿಕೆಯಾಗಿದೆ ಎಂದು ನಿನ್ನೆ ಹೇಳಿದ್ದಾರೆ. ಮೊದಲ ಹಂತದಿಂದ ಮೂರನೇ ಹಂತದವರೆಗೆ ಗಮನಿಸಿದರೆ, ಕೇಂದ್ರ ಸರಕಾರದ ಪಾಲು ಶೇ 51, ಶೇ 53, ಶೇ 52, ಶೇ 57ರಷ್ಟಿದೆ. ಕೇಂದ್ರದ ಸಾಲದ ಮೊತ್ತವನ್ನು ಬೇರೆ ಕಡೆಗೆ ಹಾಕಿಕೊಂಡಿದ್ದರಿಂದ ಹೀಗಾಗಿದೆ ಎಂದು ಅವರು ಗಮನ ಸೆಳೆದರು. ಒಂದು ಕಾಲಂ ಅನ್ನು ಇನ್ನೊಂದೆಡೆಗೆ ಸ್ಥಳಾಂತರ ಮಾಡಿದರೆ ಕೆಳಗಡೆ ಬರುವ ಎಲ್ಲ ಲೆಕ್ಕವೂ ಉಲ್ಟಾ ಆಗುತ್ತದೆ ಎಂದು ವಿವರಿಸಿದರು.

ಆಧಾರರಹಿತ ಮಾಹಿತಿ ನೀಡುವ ರಾಜ್ಯ..

ಕೇಂದ್ರ ಸರಕಾರ ಪ್ರತಿ ಕಿಮೀಗೆ 57 ಕೋಟಿ, ರಾಜ್ಯ ಸರಕಾರ 297 ಕೋಟಿ ಖರ್ಚು ಮಾಡುತ್ತಿದೆ ಎಂದಿದ್ದಾರೆ. ಇದಕ್ಕೆ ಯಾವುದೇ ಆಧಾರ ಇಲ್ಲ. ಸಾಲದ ಮೊತ್ತವನ್ನು ತಮ್ಮ ಖಾತೆಗೆ ಸೇರಿಸಿಕೊಂಡು ಈ ಆಧಾರರಹಿತ ಮಾಹಿತಿ ನೀಡಿದ್ದಾಗಿ ಟೀಕಿಸಿದರು. ಕೇವಲ 16 ಶೇಕಡಾವನ್ನು ಕೇಂದ್ರ ಕೊಡುತ್ತಿದೆ ಎನ್ನುವ ಇವರು ಅದೂ ಬೇಡವೆಂದು ಪ್ರಕಟಿಸಲಿ ಎಂದು ಸವಾಲು ಹಾಕಿದರು.

ದಿವಾಳಿ ಸರಕಾರಕ್ಕೆ ಸಾಲ ಕೊಡಲು ಸಾಧ್ಯವೇ?

ಇವರಿಗೆ ಬಿಎಂಟಿಸಿ ಬಸ್ ಸಿಬ್ಬಂದಿಗೆ ಸಂಬಳ ಕೊಡಲು ದುಡ್ಡಿಲ್ಲ. ಕೆಎಸ್‍ಆರ್‍ಟಿಸಿಗೆ 5 ಸಾವಿರ ಕೋಟಿ ಬಾಕಿ ಇದೆ. ಪಿಂಚಣಿಗಳನ್ನೂ ನಿಲ್ಲಿಸಿದ್ದಾರೆ. ದಿವಾಳಿ ಆದ ಈ ಸರಕಾರಕ್ಕೆ ಅಂತರರಾಷ್ಟ್ರೀಯ ಸಂಸ್ಥೆಗಳು ಸಾಲ ಕೊಡಲು ಸಾಧ್ಯವೇ? ಕೇಂದ್ರದ ಗ್ಯಾರಂಟಿಯಿಂದ 29 ಸಾವಿರ ಕೋಟಿ ಸಾಲ ಲಭಿಸಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.

ರಾಜ್ಯ ಸರಕಾರದಿಂದ ಭೂಸ್ವಾಧೀನದ ಖರ್ಚು

ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟ ಅವರು, ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ಮೆಟ್ರೊದ ಯೋಜನೆಯಲ್ಲಿ ಭೂಸ್ವಾಧೀನದ ಖರ್ಚನ್ನು ರಾಜ್ಯ ಸರಕಾರವೇ ಭರಿಸಬೇಕಾಗುತ್ತದೆ. ಕೇಂದ್ರವು ಯೋಜನಾ ವೆಚ್ಚ ಭರಿಸುತ್ತದೆ. ಇದು ದೇಶದ ಎಲ್ಲೆಡೆ ನಡೆಯುತ್ತದೆ. ಈ ಸಾಲದ ಮೊತ್ತವನ್ನು ರಾಜ್ಯ ಸರಕಾರ ಮರುಪಾವತಿ ಮಾಡುವುದಾದರೆ, ಆಗ ಅದನ್ನು ರಾಜ್ಯ ಸರಕಾರದ ಖಾತೆಗೆ ಸೇರಿಸಬಹುದಿತ್ತು. ಇದನ್ನು ಮರುಪಾವತಿ ಮಾಡುವುದು ಬಿಎಂಆರ್‍ಸಿಎಲ್ ಎಂದು ಗಮನಕ್ಕೆ ತಂದರು.

ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ ಅವರು ಇದ್ದರು.