Recent Posts

Wednesday, September 30, 2026
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಸಚಿವ ಸಂಪುಟದ ಘೋಷಣೆ ಅನುಷ್ಠಾನಕ್ಕೆ ಸರಕಾರ ಬದ್ಧ: ಸಚಿವ ಯು.ಟಿ.ಖಾದರ್ – ಕಹಳೆ ನ್ಯೂಸ್

ಮಂಗಳೂರು : ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಜಿಲ್ಲೆಗಳಿಗೆ ಯಾವೆಲ್ಲಾ ಯೋಜನೆಗಳಿಗೆ ಅನುದಾನ ಘೋಷಣೆ ಮಾಡಲಾಗಿದೆಯೋ ಅವುಗಳನ್ನು ಅನುಷ್ಠಾನ ಮಾಡಲು ಸರಕಾರ ಬದ್ಧವಾಗಿದೆ. ಅನುದಾನದ ಕೊರತೆ ಆಗದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದ‌ರ್ ಹೇಳಿದ್ದಾರೆ. ಮಂಗಳೂರಿನಲ್ಲಿ ಸೋಮವಾರ ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಈ ಸ್ಪಷ್ಟನೆ ನೀಡಿದರು.

ಜಾಹೀರಾತು

ಆರ್ಥಿಕ ಇಲಾಖೆಯು ಪ್ರತೀ ಮೂರು ಅಥವಾ ಆರು ತಿಂಗಳಿಗೊಮ್ಮೆ ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡುವುದು ಅದರ ಆಡಳಿತಾತ್ಮಕ ಪ್ರಕ್ರಿಯೆ. ಇದೇ ವೇಳೆ ಸಚಿವ ಸಂಪುಟದಲ್ಲಿ ಘೋಷಣೆ ಮಾಡಿರುವ ಯೋಜನೆಗಳ ಅನುಷ್ಠಾನ ಮುಖ್ಯಮಂತ್ರಿ ಹಾಗೂ ಸರಕಾರದ ಜವಾಬ್ದಾರಿಯಾಗಿರುತ್ತದೆ. ಅದನ್ನು ಹೇಗೆ, ಯಾವ ರೀತಿಯಲ್ಲಿ ಮಾಡಬೇಕು ಎಂಬುದನ್ನು ಸರಕಾರ ನಿರ್ಧರಿಸಲಿದೆ ಎಂದು ಸಚಿವರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬಿಜೆಪಿಯವರು ತಮ್ಮ ಅವಧಿಯಲ್ಲಿ ಏನು ಮಾಡಿದ್ದಾರೆ, ಏನು ಮಾಡಲಿದ್ದಾರೆ? ಕನಿಷ್ಠ ಸಚಿವ ಸಂಪುಟ ಸಭೆಯನ್ನು ಕರಾವಳಿಯಲ್ಲಿ ಮಾಡಿದ್ದಾರೆಯೇ, ಯಾವುದಾದರೂ ನೀತಿ ಜಾರಿಗೊಳಿಸಿದ್ದಾರೆಯೇ? ಅದನ್ನು ಹೇಳಲಿ. ನಾವು ಘೋಷಣೆ ಮಾಡಿದ್ದನ್ನು ಈಡೇರಿಸುತ್ತೇವೆ ಎಂದರು.

ತುಳು ಭಾಷೆಗೆ ಮಾನ್ಯತೆ ನೀಡುವುದಕ್ಕೆ ಸಂಬಂಧಿಸಿ ಡಾ.ಎಂ.ಮೋಹನ್ ಆಳ್ವ ತಂಡ ನೀಡಿದ ವರದಿ ಬಿಜೆಪಿ ಅವಧಿಯಲ್ಲಿ ಅವರ ಕೈಯಲ್ಲಿತ್ತು. ಇಲ್ಲಿನ ಸುನೀಲ್ ಕುಮಾರ್ ಅವರೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದರು. ವರದಿ ಕೈಯಲಿದ್ದು, ಸಹಿ ಹಾಕಲು ಮಾತ್ರ ಬಾಕಿ ಇದ್ದಿದ್ದು. ಅದಕ್ಕೂ ಧೈರ್ಯ ಬೇಕು. ಆ ಧೈರ್ಯವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಡಿದ್ದಾರೆ. ಈ ರೀತಿ ಸುಮ್ಮನೆ ಮಾತುಗಳಲ್ಲಿ ಆರೋಪ ಮಾಡುತ್ತಾ ಹೋದರೆ ಜಿಲ್ಲೆಯ ಜನ ಇವರನ್ನು ಕ್ಷಮಿಸುವುದಿಲ್ಲ. ಜಿಲ್ಲೆಯ ಜನರು ಶ್ರಮಜೀವಿಗಳು, ಹೆಂಚು, ಗೇರು, ಧಕ್ಕೆಯಲ್ಲಿ ಶ್ರಮ ವಹಿಸಿ ದುಡಿದು ಮೇಲೆ ಬಂದವರು. ಉಪಕಾರ ಮಾಡಿದವರನ್ನು ಮರೆಯುವುದಿಲ್ಲ. ಮುಂದಿನ ದಿನಗಳಲ್ಲಿ ಜನತೆ ಅದನ್ನು ತೋರಿಸಿಕೊಡಲಿದ್ದಾರೆ. ಸುಮ್ಮನೆ ರಾಜಕೀಯ ಮಾಡುವ ಬದಲು ಏನು ಮಾಡಿದ್ದಾರೆ ಏನು ಮಾಡುತ್ತಾರೆ ಹೇಳಲಿ ಎಂದು ಬಿಜೆಪಿ ಆರೋಪಗಳ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಯು.ಟಿ.ಖಾದರ್ ಸವಾಲೆಸೆದರು.

ಬಿಜೆಪಿಯವರಿಗೆ ಯಾವುದೂ ಯೋಜನೆ ಅನುಷ್ಠಾನ ಆಗುವುದು ಬೇಡ. ಘೋಷಣೆಯಾಗಿ ಕನಿಷ್ಠ ಆರರಿಂದ ಒಂದು ವರ್ಷವಾದರೂ ಯೋಜನೆ ಜಾರಿಯಾಗದಿದ್ದರೆ ಈ ರೀತಿಯ ರಾಜಕೀಯವನ್ನು ಒಪ್ಪಬಹುದು. ಆದರೆ ಸಚಿವ ಸಂಪುಟ ಆಗುವ ಮೊದಲೇ ವೇದವ್ಯಾಸ ಕಾಮತ್ ಚೊಂಬು ಖರೀದಿಸಿ ಮನೆಯಲ್ಲಿ ಇರಿಸಿದ್ದರೆ ಏನು ಮಾಡುವುದು ಎಂದು ಖಾದರ್ ವ್ಯಂಗ್ಯವಾಡಿದರು.

ವೆಸ್ಲಾಕ್ ಆಸ್ಪತ್ರೆಗೆ 400 ಹೆಚ್ಚುವರಿ ಬೆಡ್ಗಳ ಬೇಡಿಕೆಯ ಮೇರೆಗೆ ಸರಕಾರ ಪ್ರಾಥಮಿಕ ಹಂತದಲ್ಲಿ 200 ಬೆಡ್ಗಳನ್ನು ಮಂಜೂರುಗೊಳಿಸಿದೆ. ವೆನ್ಸಾಮ್ನಲ್ಲಿ ಉತ್ತಮ ಸೇವೆ ದೊರೆಯುತ್ತಿರುವುದರಿಂದ ಇಲ್ಲಿ ಬೇಡಿಕೆಯೂ ಹೆಚ್ಚುತ್ತಿದೆ. ದುಡ್ಡಿರುವವರೂ ವೆಸ್ಲಾಕ್ ನ ಐಸಿಯು ವಿಭಾಗದಲ್ಲಿ ಚಿಕಿತ್ಸೆ ಪಡೆಯಲು ಮುಂದಾಗುತ್ತಿದ್ದಾರೆ. ಶಿವಮೊಗ್ಗ ಚಿಕ್ಕಮಗಳೂರು, ಚಿತ್ರದುರ್ಗ, ಕಾಸರಗೋಡು ಮೊದಲಾದ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳಿದ್ದರೂ, ಅಲ್ಲಿಂದ ವೆಸ್ಲಾಕ್ ಗೆ ರೋಗಿಗಳನ್ನು ಶಿಫಾರಸು ಮಾಡಲಾಗುತ್ತಿರುವುದರಿಂದ ಒತ್ತಡ ಹೆಚ್ಚುತ್ತಿದೆ. ಇದಕ್ಕಾಗಿ ಸ್ಟಾಂಡರ್ಡ್ ಅಪರೇಶನ್ ಪ್ರೊಸೀಜ‌ರ್ (ಎಸ್‌ಒಪಿ)ಯನ್ನು ಮಾಡಲು ವೈದ್ಯಕೀಯ ಶಿಕ್ಷಣ ಇಲಾಖೆಗೂ ಸಲಹೆ ನೀಡಲಾಗಿದೆ. ಸಂದಿಗ್ಧ ಪರಿಸ್ಥಿತಿಯ ರೋಗಿಗಳನ್ನು ಹೊರತುಪಡಿಸಿ ಉಳಿದಂತೆ ಆಯಾ ಜಿಲ್ಲೆ, ತಾಲೂಕುಗಳ ರೋಗಿಗಳಿಗೆ ಸ್ಥಳೀಯ ಸರಕಾರಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಒದಗಿಸಲು ಕ್ರಮ ವಹಿಸಬೇಕು. ಇದಕ್ಕಾಗಿ ತಾಲೂಕು ಆಸ್ಪತ್ರೆಗಳನ್ನು ಬಲಪಡಿಸಬೇಕು. ಇದಕ್ಕಾಗಿ ನಿಯಮಗಳನ್ನು ರೂಪಿಸಲಾಗುತ್ತಿದೆ. ಬೈಂದೂರು ಮತ್ತು ಮೂಡಬಿದ್ರೆಯಲ್ಲಿ ಹೊಸ ತಾಲೂಕು ಆಸ್ಪತ್ರೆ ಹಾಗೂ ಭಟ್ಕಳದ ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಕ್ರಮ ವಹಿಸಲಾಗುವುದು ಎಂದು ಸಚಿವ ಯು.ಟಿ. ಖಾದರ್ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಡಾ ಅಧ್ಯಕ್ಷ ಸಂತೋಷ್‌ ಕುಮಾರ್, ಜಿ.ಪಂ. ಮಾಜಿ ಸದಸ್ಯ ಮೆಲ್ವಿನ್, ಮುಖಂಡರಾದ ಸಲೀಂ, ಇಟ್ಬಾಲ್‌ ಉಪಸ್ಥಿತರಿದ್ದರು.