ತುಳು ಭಾಷೆಗೆ ದ್ವಿತೀಯ ಅಧಿಕೃತ ಭಾಷೆ ಮಾನ್ಯತೆ: ಐತಿಹಾಸಿಕ ಬೆಳವಣಿಗೆಗೆ ವೀರು ಶೆಟ್ಟಿ ಸಂತಸ – ಕಹಳೆ ನ್ಯೂಸ್

ಧರ್ಮಸ್ಥಳ: ತುಳು ಭಾಷೆಯನ್ನು ರಾಜ್ಯದ ದ್ವಿತೀಯ ಅಧಿಕೃತ ಭಾಷೆಯನ್ನಾಗಿ ಘೋಷಿಸಿರುವ ಸರ್ಕಾರದ ನಿರ್ಧಾರಕ್ಕೆ ಧರ್ಮಸ್ಥಳದ ಖಾವಂದರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.
ತುಳು ಭಾಷೆಯ ಬೆಳವಣಿಗೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಡಾ. ಮೋಹನ್ ಆಳ್ವ ಸೇರಿದಂತೆ ಹಲವು ಗಣ್ಯರು ನಡೆಸಿದ ಪ್ರಯತ್ನಗಳನ್ನು ಅವರು ಸ್ಮರಿಸಿದ್ದಾರೆ.
ವಿಶ್ವ ತುಳು ಸಮ್ಮೇಳನದ ಮೂಲಕ ತುಳು ಭಾಷೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯ ನಡೆದಿದ್ದು, ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಎಂಬ ಪ್ರಯತ್ನಗಳು ನಡೆದಿದ್ದವು. ಇದೀಗ ರಾಜ್ಯದ ದ್ವಿತೀಯ ಅಧಿಕೃತ ಭಾಷೆಯಾಗಿ ತುಳು ಮಾನ್ಯತೆ ಪಡೆದಿರುವುದು ಸಂತಸ ತಂದಿದೆ ಎಂದು ವೀರು ಶೆಟ್ಟಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತುಳುನಾಡಿಗೆ ಬಂದು ತುಳು ಭಾಷೆಗೆ ಪ್ರಾಶಸ್ತ್ಯ ನೀಡಿರುವುದು ಸಂತಸದ ವಿಚಾರವಾಗಿದ್ದು, ಮುಂದಿನ ದಿನಗಳಲ್ಲಿ ಸರ್ಕಾರಿ ಸಭೆಗಳಲ್ಲಿಯೂ ತುಳು ಭಾಷೆಯ ಬಳಕೆಗೆ ಅವಕಾಶ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟಕ್ಕೆ ಅಭಿನಂದನೆ ಸಲ್ಲಿಸುವುದಾಗಿ ವೀರು ಶೆಟ್ಟಿ ತಿಳಿಸಿದ್ದಾರೆ.










