
ಕನ್ನಡ ಚಿತ್ರರಂಗದಲ್ಲಿ ಹೊಸ ಬಗೆಯ ಕಥೆಗಳ ಅಲೆ ಜೋರಾಗಿದ್ದು, ಇದೀಗ ಮತ್ತೊಂದು ವಿಭಿನ್ನ ಹಾಗೂ ಭರವಸೆಯ ಹೊಸ ಚಿತ್ರ ಸೆಟ್ಟೇರಿದೆ. ಚಿತ್ರಕ್ಕೆ ‘ಗಣಪತಿ ಬಪ್ಪ ಮೋರಿಯಾ’ ಎಂದು ಶೀರ್ಷಿಕೆ ಇಡಲಾಗಿದ್ದು, ಚಿತ್ರತಂಡ ಅಧಿಕೃತವಾಗಿ ಟೈಟಲ್ ಜೊತೆಗೆ ಆಕರ್ಷಕ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಧಿಕೃತ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ.
ಸಂಪೂರ್ಣ ಹೊಸತನದಿಂದ ಕೂಡಿರುವ ಪೋಸ್ಟರ್ ಸದ್ಯ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಈ ಚಿತ್ರವು ಪೊಲಿಟಿಕಲ್ ಥ್ರಿಲ್ಲರ್ ಜಾನರ್ನಲ್ಲಿ ಮೂಡಿಬರಲಿದೆ. ಕಥೆಯ ಗಟ್ಟಿತನಕ್ಕಾಗಿ ಚಿತ್ರತಂಡ ಬರೋಬ್ಬರಿ ಒಂದೂವರೆಯಿಂದ ಎರಡು ವರ್ಷಗಳ ಕಾಲ ಪ್ರಿ-ಪ್ರೊಡಕ್ಷನ್ ನಡೆಸಿದೆ. ಈಗಾಗಲೇ ಚಿತ್ರದ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಮುಂದಿನ ತಿಂಗಳಿಂದ ಎರಡನೇ ಹಂತದ ಶೂಟಿಂಗ್ ಭರದಿಂದ ಸಾಗಲಿದೆ.
ಚಿತ್ರದಲ್ಲಿ ಭರವಸೆಯ ಯುವ ತಾರಾಗಣವಿದ್ದು, ‘ಮನದ ಕಡಲು’ ಸುಮುಖ, ‘ಟಾಮ್ ಅಂಡ್ ಜೆರಿ’ ಖ್ಯಾತಿಯ ನಿಶ್ಚಿತ್ ಕರೋಡಿ, ‘ಬಿಂಗೋ’ ಚಿತ್ರದ ಚಂದನ್ ಆರ್.ಕೆ ಹಾಗೂ ‘ಕಾಮಿಡಿ ಕಿಲಾಡಿಗಳು’ ಸೂರಜ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಚಿತ್ರದ ನಾಯಕಿಯಾಗಿ ತೆಲುಗು ನಟಿ ಬಾಂಧವಿ ಶ್ರೀಧರ್ ಬಣ್ಣ ಹಚ್ಚಿದ್ದಾರೆ. ಇವರ ಜೊತೆಗೆ ಆಡಿಷನ್ ಮೂಲಕ ರಾಜ್ಯಾದ್ಯಂತ ಆಯ್ಕೆಯಾದ ಹಲವು ಹೊಸ ಪ್ರತಿಭೆಗಳಿಗೂ ಚಿತ್ರದಲ್ಲಿ ಅವಕಾಶ ನೀಡಲಾಗಿದೆ.











