ಶಿರೂರು | ನಿಯಂತ್ರಣ ತಪ್ಪಿದ ಲಾರಿ, ಹೈವೆ ಪಟ್ರೋಲ್ ವಾಹನಕ್ಕೆ ಡಿಕ್ಕಿ, ನಾಲ್ಕು ಬೈಕ್ ಜಖಂ; ಓರ್ವ ಮೃತ್ಯು – ಕಹಳೆ ನ್ಯೂಸ್

ಬೈಂದೂರು: ಅಪಘಾತವಾಗಿದ್ದ ವಾಹನವನ್ನು ಮೇಲೆತ್ತುವ ವೇಳೆ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿದ ಲಾರಿಯೊಂದು ನಿಲ್ಲಿಸಿದ ಪೊಲೀಸರ ಗಸ್ತು (ಹೈವೆ ಪಟ್ರೋಲ್) ವಾಹನಕ್ಕೆ ಡಿಕ್ಕಿ ಹೊಡೆದಿದ್ದಲ್ಲದೆ ನಾಲ್ಕು ಬೈಕ್ ಗಳಿಗೆ ಗುದ್ದಿ ಜಖಂಗೊಳಿಸಿದ ಸರಣಿ ಅಪಘಾತದಲ್ಲಿ ಬೈಕ್ ನಲ್ಲಿದ್ದ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಶಿರೂರು ಸಮೀಪ ಗುರುವಾರ ನಡೆದಿದೆ.
ಶಿರೂರಿನ ನಾಗೇಂದ್ರ ಮಹಾಲೆ (45) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಹೆದ್ದಾರಿಯಲ್ಲಿ ಸರಕು ತುಂಬಿದ ಲಾರಿಯನ್ನು ಹೆದ್ದಾರಿ ನಿರ್ವಹಣೆಯವರು ಮೇಲೆತ್ತುವ ಸಂದರ್ಭದಲ್ಲಿ ರಸ್ತೆ ತಡೆ ಮಾಡಲಾಗಿತ್ತು. ವಾಹನ ಸಂಚಾರ ತಡೆಗೆ ಬ್ಯಾರಿಕೆಡ್ ಹಾಕಲಾಗಿತ್ತು. ಇಳಿಜಾರು ರಸ್ತೆಯಾದ ಕಾರಣ ಅತಿವೇಗದಿಂದ ನುಗ್ಗಿದ ಲಾರಿ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ರಬ್ಬರ್ ತುಂಬಿದ ಲಾರಿ ಕೇರಳದಿಂದ ಮಹಾರಾಷ್ಟ್ರದ ಕಡೆಗೆ ಸಾಗುತ್ತಿತ್ತು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ವೃತ್ತನಿರೀಕ್ಷಕ ಸಂತೋಷ ಕಾಯ್ಕಿಣಿ ಹಾಗೂ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











