ಗೋವಾ ಆಗಸದಲ್ಲಿ ತಪ್ಪಿತು ಅವಘಡ : ದೆಹಲಿಗೆ ಟೇಕಾಫ್ ಆಗಿದ್ದ ಇಂಡಿಗೋ ವಿಮಾನದ ಒಂದು ಎಂಜಿನ್ ಆಫ್; ತಕ್ಷಣ ಯೂ ಟರ್ನ್- ಕಹಳೆ ನ್ಯೂಸ್

ಪಣಜಿ: ದೆಹಲಿಯಿಂದ ಗೋವಾಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನವೊಂದು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ಮಂಗಳವಾರ (ಇಂದು) ಗೋವಾದ ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ.
ಗೋವಾದಿಂದ (Goa) ಟೇಕಾಫ್ ಆಗಿದ್ದ ವಿಮಾನದ ಒಂದು ಇಂಜಿನ್ ಕೆಲವೇ ಕ್ಷಣಗಳಲ್ಲಿ ಆಫ್ ಆಗಿದೆ. ತಕ್ಷಣ ಎಚ್ಚೆತ್ತ ಪೈಲಟ್ ಮತ್ತೆ ಗೋವಾಗೆ ಯೂಟರ್ನ್ ತೆಗೆದುಕೊಂಡಿದ್ದಾರೆ. ಇದರಿಂದ ಭಾರೀ ದುರಂತವೊಂದು ತಪ್ಪಿದಂತಾಗಿದೆ.
ಈ ಕುರಿತು ಇಂಡಿಗೋ ಅಧಿಕೃತ ಹೇಳಿಕೆಯಲ್ಲಿ, `ಸೆಪ್ಟೆಂಬರ್ 1ರಂದು (ಇಂದು) ಉತ್ತರ ಗೋವಾದಿಂದ ದೆಹಲಿಗೆ ತೆರಳುತ್ತಿದ್ದ 6E 2102 ವಿಮಾನದಲ್ಲಿ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷ ಪತ್ತೆಯಾಗಿದೆ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಬಂದಿದೆ. ಬಳಿಕ ಪೈಲಟ್‌ಗಳು ವಿಮಾನವನ್ನ ಹಿಂದಕ್ಕೆ ತಿರುಗಿಸಿ ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ ಎಂದು ತಿಳಿಸಿದೆ.
ಪ್ರಸ್ತುತ ವಿಮಾನವು ನಿರ್ವಹಣಾ ತಪಾಸಣೆಗೆ ಒಳಪಡಿಸಲಾಗಿದೆ. ಅಗತ್ಯವಿರುವ ಎಲ್ಲಾ ಅನುಮತಿಗಳನ್ನ ಪಡೆದ ಬಳಿಕ ವಿಮಾನ ಮತ್ತೆ ಕಾರ್ಯಾಚರಣೆ ಆರಂಭಿಸಲಿದೆ ಎಂದು ಇಂಡಿಗೋ ತಿಳಿಸಿದೆ.
ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿರುವ ವಿಮಾನಯಾನ ಸಂಸ್ಥೆ, ಪ್ರಯಾಣಿಕರಿಗೆ ಉಪಾಹಾರ ಸೇರಿದಂತೆ ಅಗತ್ಯ ನೆರವು ಒದಗಿಸಲಾಗಿದೆ ಮತ್ತು ಸಮಯೋಚಿತ ಮಾಹಿತಿಯನ್ನು ನೀಡಲಾಗಿದೆ. ಪ್ರಯಾಣಿಕರು ತಮ್ಮ ನಿಗದಿತ ಸ್ಥಾನ ತಲುಪಲು ಪರ್ಯಾಯ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ತಿಳಿಸಿದೆ.
ದೇಶೀಯ ವಿಮಾನ ಪ್ರಯಾಣಿಕರಿಗೆ ಮತ್ತೊಂದು ಹೊಡೆತ
ಇದೇ ವೇಳೆ, ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಮತ್ತೊಂದು ಸವಾಲು ಎದುರಾಗಿದೆ. ಏವಿಯೇಷನ್ ಟರ್ಬೈನ್ ಫ್ಯುಯೆಲ್ (ATF) ಬೆಲೆಯನ್ನು ಪ್ರತಿ ಲೀಟರ್‌ಗೆ 6.28 ರೂ.ನಷ್ಟು ರಷ್ಟು ಹೆಚ್ಚಿಸಲಾಗಿದೆ. ಇದು ಸತತ 2ನೇ ತಿಂಗಳ ATF ಬೆಲೆ ಏರಿಕೆಯಾಗಿದೆ. ಹೊಸ ದರದೊಂದಿಗೆ ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಜೆಟ್ ಇಂಧನದ ಬೆಲೆ ಪ್ರತಿ ಲೀಟರ್‌ಗೆ 115 ರೂ. ರಿಂದ 121.28 ರೂ. ಕ್ಕೆ ಏರಿಕೆಯಾಗಿದೆ. ಅಂದರೆ, ಸುಮಾರು 5.46%ರಷ್ಟು ಹೆಚ್ಚಳವಾಗಿದೆ. ಹೀಗಾಗಿ, ATF ಬೆಲೆ ಏರಿಕೆಯ ಪರಿಣಾಮ ವಿಮಾನ ಪ್ರಯಾಣ ದುಬಾರಿಯಾಗುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.











