Monday, August 24, 2026
ಸುದ್ದಿ

ರೈತರ ಕೃಷಿ, ಜೀವ ನಾಶವಾಗುತ್ತಿದ್ದರೂ ಕರುಣೆ ತೋರದ ‘ದಪ್ಪ ಚರ್ಮದ’ ಸರ್ಕಾರದ ವಿರುದ್ಧ ಉಗ್ರ ಹೋರಾಟ : ಶಾಸಕ ಕಿಶೋರ್ ಕುಮಾರ್ ಪುತ್ತೂರು ಎಚ್ಚರಿಕೆ – ಕಹಳೆ ನ್ಯೂಸ್

ಕಾಡುಪ್ರಾಣಿಗಳಿಂದ ಕೃಷಿ ಮತ್ತು ಜೀವ ರಕ್ಷಿಸಿಕೊಳ್ಳಲು ರೈತರು ಹೊಂದಿರುವ ಕೋವಿ (ಬಂದೂಕು) ಪರವಾನಗಿ ನವೀಕರಣದಲ್ಲಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ನೀಡುತ್ತಿರುವ ಕಿರುಕುಳವನ್ನು ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ತೀವ್ರವಾಗಿ ಖಂಡಿಸಿದ್ದಾರೆ.

ಜಾಹೀರಾತು

ವಿಧಾನ ಪರಿಷತ್ತಿನಲ್ಲಿ ಕೋವಿ ಪರವಾನಗಿ ನವೀಕರಣದ ವಿಳಂಬದ ಕುರಿತು ಶಾಸಕರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಗೃಹ ಸಚಿವರು, “ಪರವಾನಗಿ ನವೀಕರಣ ಪ್ರಕ್ರಿಯೆಯನ್ನು ಸರಳೀಕರಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ” ಎಂದು ನೀಡಿರುವ ಉದ್ಧಟತನದ ಉತ್ತರ ಸರ್ಕಾರದ ರೈತ ವಿರೋಧಿ ನೀತಿಯನ್ನು ಬಟಾಬಯಲು ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸರ್ಕಾರದ ಈ ನಿರ್ಲಕ್ಷ್ಯ ಹಾಗೂ ಅವೈಜ್ಞಾನಿಕ ನೀತಿಗಳ ವಿರುದ್ಧ ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು ಈ ಕೆಳಗಿನ ಅಂಶಗಳ ಮೂಲಕ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ:

೧. 5 ವರ್ಷದ ಅವಕಾಶವಿದ್ದರೂ 2 ವರ್ಷಕ್ಕೆ ಕಡಿತ – ಅಧಿಕಾರಿಗಳ ದಬ್ಬಾಳಿಕೆ:
ಕಾನೂನಿನ ಪ್ರಕಾರ ಜಿಲ್ಲಾಧಿಕಾರಿಗಳಿಗೆ ಕೋವಿ ಪರವಾನಗಿಯನ್ನು ಗರಿಷ್ಠ ೫ ವರ್ಷಗಳವರೆಗೆ ನವೀಕರಿಸಿಕೊಡುವ ಅವಕಾಶ ಹಾಗೂ ಅಧಿಕಾರವಿದೆ. ವಾಸ್ತವ ಹೀಗಿದ್ದರೂ, ಅಧಿಕಾರಿಗಳು ಉದ್ದೇಶಪೂರ್ವಕವಾಗಿ ೫ ವರ್ಷಕ್ಕೆ ನವೀಕರಿಸಬಹುದಾದ ಪರವಾನಗಿಯನ್ನು ಕೇವಲ ೨ ವರ್ಷಕ್ಕೆ ಸೀಮಿತಗೊಳಿಸುತ್ತಿದ್ದಾರೆ. ಇದು ರೈತರು ತಮ್ಮ ಕೃಷಿ ಕೆಲಸ ಬಿಟ್ಟು ಸದಾ ಸರ್ಕಾರಿ ಕಚೇರಿಗಳಿಗೆ, ಪೊಲೀಸ್ ಠಾಣೆಗಳಿಗೆ ಅಲೆಯುವಂತೆ ಮಾಡುವ ಹುನ್ನಾರವಾಗಿದೆ.

೨. ರೋಗಬಾಧೆ ಹಾಗೂ ಆನೆಗಳ ದಾಳಿಯಿಂದ ಗುಳೆ ಹೋಗುತ್ತಿರುವ ರೈತರು:
ಕರಾವಳಿ ಹಾಗೂ ಮಲೆನಾಡು ಭಾಗದ ರೈತರು ಈಗಾಗಲೇ ಅಡಿಕೆ ಎಲೆಚುಕ್ಕೆ ರೋಗ, ಹಳದಿ ರೋಗ ಹಾಗೂ ಅಕಾಲಿಕ ಮಳೆಯಿಂದ ತತ್ತರಿಸಿ ಕಂಗಾಲಾಗಿದ್ದಾರೆ. ಇದರ ನಡುವೆ ನಿರಂತರವಾಗಿ ನಡೆಯುತ್ತಿರುವ ಆನೆಗಳ ದಾಳಿಯಿಂದಾಗಿ ಜನ ಮನೆಯಿಂದ ಆಚೆ ಬರಲೂ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡು ಪ್ರಾಣಿಗಳ ಈ ಭೀಕರ ಉಪಟಳದಿಂದಾಗಿ ಕೃಷಿಯನ್ನೇ ನಂಬಿಕೊಂಡ ರೈತರು ತಮ್ಮ ಜಾಗ, ತೋಟಗಳನ್ನು ಖಾಲಿ ಮಾಡಿ ಗುಳೆ ಹೋಗುವಂತಹ ಪರಿಸ್ಥಿತಿ ಬಂದೊದಗಿದೆ. ಇಷ್ಟೆಲ್ಲಾ ಅನಾಹುತಗಳಾಗುತ್ತಿದ್ದರೂ, ಈ ಸರ್ಕಾರಕ್ಕೆ ರೈತರ ಮೇಲೆ ಕಿಂಚಿತ್ತೂ ಕರುಣೆ ಇಲ್ಲದಿರುವುದು ದುರಂತ.

೩. ಪರಿಹಾರದ ದಾಖಲೆ ಕೇಳುವುದು ಮೂರ್ಖತನದ ಪರಮಾವಧಿ:
“ಕಾಡು ಪ್ರಾಣಿಗಳ ದಾಳಿಗೆ ಪರಿಹಾರ ಪಡೆದ ದಾಖಲೆಗಳಿದ್ದರೆ ಮಾತ್ರ ಲೈಸೆನ್ಸ್ ನವೀಕರಿಸುತ್ತೇವೆ” ಎನ್ನುವುದು ಅಪ್ಪಟ ರೈತ ವಿರೋಧಿ ನೀತಿಯಾಗಿದೆ. ಪ್ರಾಣಿಗಳು ಯಾವಾಗ, ಎಲ್ಲಿ ದಾಳಿ ಮಾಡುತ್ತವೆ ಎಂದು ಮೊದಲೇ ಊಹಿಸಲು ಸಾಧ್ಯವೇ?. ಅಸಂಖ್ಯಾತ ರೈತರ ಅರ್ಜಿಗಳನ್ನು ತಿರಸ್ಕರಿಸುತ್ತಿರುವ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಕಾಡಂಚಿನ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ರೈತರ ಕಷ್ಟ ಏನೆಂದು ಅರಿಯಲಿ.

‘ದಪ್ಪ ಚರ್ಮದ’ ಸರ್ಕಾರಕ್ಕೆ ಬಿಸಿ ಮುಟ್ಟಿಸುವವರೆಗೆ ನಿಲ್ಲದು ಹೋರಾಟ:
ರೈತರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಈ ದಪ್ಪ ಚರ್ಮದ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ. ಕೋವಿ ಪರವಾನಗಿ ನವೀಕರಣವನ್ನು ತಕ್ಷಣವೇ ಸರಳೀಕರಿಸಬೇಕೆಂದು ಆಗ್ರಹಿಸಿ, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಶಾಸಕರು, ಸಂಸದರೂ ಹಾಗು , ಕಿಸಾನ್ ಸಂಘ ಮತ್ತು ಜಿಲ್ಲೆಯ ಬಂದೂಕು ಪರವಾನಗಿ ದಾರರ ಒಕ್ಕೂಟದ ಶ್ರೀ ಜಯಪ್ರಸಾದ್ ಜೋಶಿ, ಇಳಂತಾಜೆ ಸುಕುಮಾರ್ ಮತ್ತು ಬಳಗದ ಸಾವಿರಾರು ರೈತ ಬಾಂಧವರನ್ನು ಒಳಗೊಂಡ ತಂಡದೊಂದಿಗೆ ಸರ್ಕಾರದ ವಿರುದ್ಧ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು.

ಈ ನಿಟ್ಟಿನಲ್ಲಿ ರೈತರು ರಚಿಸಿಕೊಂಡಿರುವ ಹೋರಾಟ ಸಮಿತಿಗಳಿಗೆ ನಮ್ಮ ಸಂಪೂರ್ಣ ಸಹಕಾರ ಹಾಗೂ ಬೆಂಬಲ ಇರಲಿದೆ. ರೈತ ಸಮಿತಿಗಳ ಮಾರ್ಗದರ್ಶನದೊಂದಿಗೆ ರೈತರ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವಲ್ಲಿ ನಾವು ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇವೆ. ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಈ ಅವೈಜ್ಞಾನಿಕ ನಿಯಮಗಳನ್ನು ಕೈಬಿಟ್ಟು, ಕೋವಿ ಪರವಾನಗಿ ನವೀಕರಣ ಪ್ರಕ್ರಿಯೆಯನ್ನು ಸರಳೀಕರಿಸಬೇಕು ಎಂದು ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಕಠಿಣ ಎಚ್ಚರಿಕೆ ನೀಡಿದ್ದಾರೆ.