ರಾತ್ರೋರಾತ್ರಿ ಲೇಡಿಸ್ ಪಿಜಿಗೆ ನುಗ್ಗಿದ ಕಳ್ಳ; ಲ್ಯಾಪ್‌ಟಾಪ್, ಸ್ಮಾರ್ಟ್‌ವಾಚ್ ಕದ್ದು ಪರಾರಿ – ಕಹಳೆ ನ್ಯೂಸ್

ಬೆಂಗಳೂರು: ಕೋರಮಂಗಲದಲ್ಲಿ ರಾತ್ರಿ ವೇಳೆ ಮಹಿಳೆಯರ ಪಿಜಿಗೆ ನುಗ್ಗಿದ ಅಪರಿಚಿತ ವ್ಯಕ್ತಿ, ಯಾರಿಗೂ ಗೊತ್ತಾಗದಂತೆ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾನೆ.
ಈ ಘಟನೆ ಜುಲೈ 30ರಂದು ಕೋರಮಂಗಲದ ನೆಕ್ಸಸ್ ಮಾಲ್ ಸಮೀಪದ ಮಹಿಳೆಯರ ಪಿಜಿಯಲ್ಲಿ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ ಮುಖ್ಯ ದ್ವಾರದ ಮೂಲಕ ಪಿಜಿಯೊಳಗೆ ಪ್ರವೇಶಿಸಿದ್ದಾನೆ.
ಪಿಜಿಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳ, ಅಲ್ಲಿದ್ದ ಲ್ಯಾಪ್‌ಟಾಪ್, ಸ್ಮಾರ್ಟ್‌ವಾಚ್ ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳನ್ನು ಕದ್ದು ಸ್ಥಳದಿಂದ ಪರಾರಿಯಾಗಿದ್ದಾನೆ.
ಕಳ್ಳತನದ ವಿಷಯ ತಿಳಿಯುತ್ತಿದ್ದಂತೆ ಪಿಜಿ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಎಸ್.ಜಿ. ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಗಳು ಹಾಗೂ ಇತರ ಸಾಕ್ಷ್ಯಗಳ ಆಧಾರದಲ್ಲಿ ಕಳ್ಳನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.










