ದ.ಕ ಜಿಲ್ಲೆಯಾದ್ಯಂತ ವರುಣನ ಆರ್ಭಟ; ನೇತ್ರಾವತಿ ನದಿಯ ನೀರಿನ ಮಟ್ಟ ಏರಿಕೆ – ಕಹಳೆ ನ್ಯೂಸ್

ಮಂಗಳೂರು :ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ರಾತ್ರಿ ಆರಂಭವಾದ ಮಳೆಯ ಆರ್ಭಟ ಶನಿವಾರವೂ ಮುಂದುವರಿದಿದೆ.
ಬೆಳಗ್ಗೆಯಿಂದಲೇ ಸುರಿದ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವು ಕಡೆ ವಾಹನ ಸವಾರರು ಹಾಗೂ ಕಚೇರಿಗಳಿಗೆ ತೆರಳುತ್ತಿದ್ದ ಸಾರ್ವಜನಿಕರು ಸಂಕಷ್ಟ ಅನುಭವಿಸಿದರು.
ಮಳೆಯ ತೀವ್ರತೆಯನ್ನು ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಧಿಕಾರಿ ಎಚ್. ವಿ. ದರ್ಶನ್ ಅವರು ಇಂದು (ಆ.01) ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು, ಪ್ರೌಢಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿದ್ದರು. ಇದರೊಂದಿಗೆ ಜಿಲ್ಲೆಯ ಎಲ್ಲಾ ಐಟಿಐ ಹಾಗೂ ಡಿಪ್ಲೊಮಾ ಕಾಲೇಜುಗಳಿಗೂ ರಜೆ ಅನ್ವಯವಾಗಿದೆ.
ಇಂದು ಬೆಳಗ್ಗಿನ ವೇಳೆಗೆ ವರುಣನ ಅಬ್ಬರ ಜೋರಾಗಿದ್ದು, ನಗರದ ಹಲವೆಡೆ ನೀರು ನಿಂತು ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು. ಇನ್ನೊಂದೆಡೆ, ನಿರಂತರ ಮಳೆಯಿಂದ ನೇತ್ರಾವತಿ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ನದಿ ಪಾತ್ರದ ನಿವಾಸಿಗಳು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.










