
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಫೋನ್ ಕರೆ ಮಾಡಿ ಅವರ ಪತ್ನಿ ಚೆನ್ನಮ್ಮರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಚೆನ್ನಮ್ಮ ಅವರ ನಿಧನಕ್ಕೆ ಎಕ್ಸ್ ಪೋಸ್ಟ್‌ನಲ್ಲಿ ಮೋದಿ ಸಂತಾಪದ ನುಡಿಗಳನ್ನಾಡಿದ್ದಾರೆ. ಮಾಜಿ ಪ್ರಧಾನಮಂತ್ರಿ ಶ್ರೀ ದೇವೇಗೌಡ ಅವರ ಪತ್ನಿ ಶ್ರೀಮತಿ ಚೆನ್ನಮ್ಮನವರ ನಿಧನದಿಂದ ತೀವ್ರ ದುಃಖವಾಗಿದೆ. ಅವರು ತಮ್ಮ ವಿನಯ ಮತ್ತು ಸಮಾಜ ಸೇವೆಯ ಮೇಲಿನ ಬದ್ಧತೆಗಾಗಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು. ಈ ದುಃಖದ ಸಮಯದಲ್ಲಿ, ಶ್ರೀ ದೇವೇಗೌಡರು ಮತ್ತು ಅವರ ಇಡೀ ಕುಟುಂಬಕ್ಕೆ ನನ್ನ ಹೃದಯಪೂರ್ವಕ ಸಂತಾಪಗಳು. ಓಂ ಶಾಂತಿ ಎಂದು ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.

ತೀವ್ರ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಚಿಕಿತ್ಸೆ ಫಲಿಸದೇ ಶನಿವಾರ ಆಸ್ಪತ್ರೆಯಲ್ಲಿ ನಿಧನರಾದರು. ಚೆನ್ನಮ್ಮ ಅವರ ಅಂತ್ಯಕ್ರಿಯೆ ಸೋಮವಾರ ದೇವೇಗೌಡರ ಹುಟ್ಟೂರಿನಲ್ಲಿ ನಡೆಯಲಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.











