
ಡೆಹ್ರಾಡೂನ್: ಉತ್ತರಾಖಂಡದಲ್ಲಿರುವ ಬದರಿನಾಥ ಧಾಮದಿಂದ ಫಾಟ್ ಕಡೆಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಒಂದು ಪ್ರತಿಕೂಲ ಜೋಶಿಮಠ ಸಮೀಪ ಪತನಗೊಂಡು 6 ಮಂದಿ ಮೃತಪಟ್ಟಿದ್ದಾರೆ.
ಜೋಶಿಮಠದ ‘ಹಾತಿ ಪಹಾಡ್’ ಹಿಂಭಾಗದಲ್ಲಿರುವ ಚಾಯಿ ಗ್ರಾಮದ ಬಳಿ ಹೆಲಿಕಾಪ್ಟರ್ ಪತನಗೊಂಡಿರಬಹುದು ಎಂದು ಶಂಕಿಸಲಾಗಿದೆ. ಹೆಲಿಕಾಪ್ಟರ್ನಲ್ಲಿದ್ದ ಕ್ಯಾ. ಹಿಮಾಂಶು ಜೊತೆ ಪ್ರಯಾಣಿಕರಾದ ಪ್ರತಾಪ, ಅರುಣ್, ಶಂಕರ್ ಗೌಡ, ಸುಧೀರ್, ಕೆ ಹೆಎಸ್ ನಟರಾಜ ಮೃತಪಟ್ಟಿದ್ದಾರೆ.
ಬದರಿನಾಥ ಧಾಮದಿಂದ ಹೊರಟಿದ್ದ ಈ ಹೆಲಿಕಾಪ್ಟರ್, ಬದರಿನಾಥ ಮತ್ತು ಜೋಶಿಮಠ ನಡುವೆ ಹಾರಾಟ ನಡೆಸುತ್ತಿದ್ದ ವೇಳೆ ಏಕಾಏಕಿ ನಾಪತ್ತೆಯಾಗಿದ್ದು, ನಿಯಂತ್ರಣ ಕೊಠಡಿಯೊಂದಿಗಿನ ಸಂಪರ್ಕ ಕಡಿದುಕೊಂಡಿದೆ ಎಂದು ಚಮೋಲಿ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಸ್ಥಳೀಯ ಆಡಳಿತ, ಪೊಲೀಸ್ ಹಾಗೂ ವಿಪತ್ತು ನಿರ್ವಹಣಾ ತಂಡಗಳು ಚಾಯಿ ಗ್ರಾಮ ಹಾಗೂ ಹಾತಿ ಪಹಾಡ್ ಸುತ್ತಮುತ್ತಲಿನ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿವೆ.
ಚಾರ್ ಧಾಮ್ ಯಾತ್ರಾ ಮಾರ್ಗದಲ್ಲಿ ಹೆಲಿಕಾಪ್ಟರ್ಗಳ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ವ್ಯಕ್ತವಾಗುತ್ತಿದೆ.ಇದೇ ಅಕ್ಟೋಬರ್ ತಿಂಗಳ ಆರಂಭದಲ್ಲಿ ತೀವ್ರ ಹವಾಮಾನ ವೈಪರೀತ್ಯದ ಕಾರಣದಿಂದ ರುದ್ರಪ್ರಯಾಗದಲ್ಲಿ ಹೆಲಿಕಾಪ್ಟರ್ ಒಂದು ತುರ್ತು ಭೂಸ್ಪರ್ಶ ಮಾಡಿತ್ತು. ಮತ್ತೊಂದೆಡೆ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟೆಹ್ರಿ ಬಳಿ ಇನ್ನೊಂದು ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್ ನಡೆಸಿತ್ತು.
ಇದೀಗ ಬದರಿನಾಥ ಮಾರ್ಗದಲ್ಲಿ ಮತ್ತೊಂದು ಹೆಲಿಕಾಪ್ಟರ್ ನಾಪತ್ತೆಯಾಗಿ ಪತನಗೊಂಡಿರುವ ಶಂಕೆ ವ್ಯಕ್ತವಾಗಿರುವುದು ಯಾತ್ರಾರ್ಥಿಗಳು ಹಾಗೂ ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ. ಹೆಲಿಕಾಪ್ಟರ್ನಲ್ಲಿದ್ದ ಪ್ರಯಾಣಿಕರು ಮತ್ತು ಪೈಲಟ್ಗಳ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.











